ಲಾಹೋರ್ :ಕಳೆದ ತಿಂಗಳ ಇಸ್ಲಾಮಿಕ್ ಗುಂಪಿನ ಬೃಹತ್ ಸಭೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರನ್ನು ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಈ ನಡುವೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡ 300ಕ್ಕೂ ಹೆಚ್ಚು ಜನರಲ್ಲಿ ಭಾನುವಾರ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಪಾಕ್‌ನ ರೈವಿಂಡ್ ನಗರವನ್ನು ಅಧಿಕಾರಿಗಳು ಸಂಪೂರ್ಣ ಕ್ಯಾರಂಟೈನ್ನಲ್ಲಿರಿಸಿದ್ದಾರೆ. ನಗರದ ಒಳಗೆ ಅಥವಾ ಹೊರಗೆ ಜನ ಹೋಗದಂತೆ ನಿರ್ಬಂಧಿಸಲಾಗಿದೆ.
ಪ್ರಾಥಮಿಕ ಮತ್ತು ದ್ವಿತೀಯ ಆರೋಗ್ಯ ಕೊರೊನಾ ಮಾನಿಟರಿಂಗ್ ರೂಮ್ ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಪಂಜಾಬ್ ಪ್ರಾಂತ್ಯದ ವಿವಿಧ ಭಾಗಗಳಲ್ಲಿನ ತಬ್ಲಿಘಿ ತಮಾತ್ನ ಸುಮಾರು 300ಕ್ಕೂ ಹೆಚ್ಚು ಜನರಲ್ಲಿ ಭಾನುವಾರ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇವರೆಲ್ಲರೂ ಲಾಹೋರ್‌ನ ತಬ್ಲಿಘಿ ಜಮಾತ್ ಮರ್ಕಜ್ಗೆ ಸೇರಿದವರಾಗಿದ್ದಾರೆ. ಈಗಾಗಲೇ ಇದನ್ನು ಸಂಪೂರ್ಣ ಕ್ವಾರಂಟೈನ್ನಲ್ಲಿಡಲಾಗಿದೆ.
ರಾವಲ್ಪಿಂಡಿ, ಜೆಹ್ಲಮ್, ನಂಕಾನಾ ಸಾಹಿಬ್, ಸರ್ಗೋಧಾ, ವೆಹಾರಿ, ಫೈಸಲಾಬಾದ್, ಕಲಶಾ ಕಾಕು ಮತ್ತು ಪಂಜಾಬ್‌ನ ರಹೀಮ್ ಯಾರ್ ಖಾನ್ ಜಿಲ್ಲೆಗಳು ತಬ್ಲಿಘಿ ಬೋಧಕರನ್ನು ಇರಿಸಲಾಗಿರುವ ಇತರ ಕೇಂದ್ರಗಳಾಗಿವೆ. ಮಾರ್ಚ್ ಆರಂಭದಲ್ಲಿ ಲಾಹೋರ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಒಂದು ಪ್ರಮುಖ ಸಭೆಗೆ ಹಾಜರಾಗಿದ್ದ ಹೆಚ್ಚಿನ ಸಂಖ್ಯೆಯ ಬೋಧಕರಲ್ಲಿ ಕೊರೊನಾ ಸೋಂಕು ಕಂಡು ಬಂದ ನಂತರ ದೇಶಾದ್ಯಂತ ಅವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ನಲ್ಲಿಡಲಾಗಿದೆ. ಕೊರೊನಾ ವೈರಸ್ ವಾಹಕಗಳೆಂದು ಶಂಕಿಸಲಾಗಿರುವ, ಐದು ನೈಜೀರಿಯಾದ ಮಹಿಳೆಯರು ಸೇರಿ ಜಮಾತ್‌ನ ಸುಮಾರು 50 ಸದಸ್ಯರನ್ನು ಲಾಹೋರ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಕಸೂರ್‌ನಲ್ಲಿಡಲಾಗಿದೆ. ಇರಾನ್‌ನಿಂದ ಹಿಂದಿರುಗಿದ ಮತ್ತು ಕೊರೊನಾ ಪಾಸಿಟಿವ್ ಪರೀಕ್ಷಿಸಿದ 200ಕ್ಕೂ ಹೆಚ್ಚು ಶಿಯಾ ಯಾತ್ರಿಕರನ್ನು ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್ ಮತ್ತು ಮುಲ್ತಾನ್ ಜಿಲ್ಲೆಗಳಲ್ಲಿ ನಿರ್ಬಂಧಿಸಲಾಗಿದೆ.
ಹಲವಾರು ದೇಶಗಳ ಸಾವಿರಾರು ಜನರು ಭಾಗವಹಿಸಿದ್ದ ಐದು ದಿನಗಳ ತಬ್ಲಿಘಿ ಸಭೆಯನ್ನು ರದ್ದುಗೊಳಿಸುವಂತೆ ಪಾಕಿಸ್ತಾನದ ಅಧಿಕಾರಿಗಳು ಒತ್ತಾಯಿಸಿದ್ದರು. ಜಮಾತ್ ಕಾರ್ಯಕ್ರಮಕ್ಕೆ ಹಾಜರಾದ ಎಲ್ಲರನ್ನೂ ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ಅಧಿಕಾರಿಗಳು ಇನ್ನೂ ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಮಾತ್ರವಲ್ಲದೇ ಭಾರತ, ಮಲೇಷ್ಯಾ ಮತ್ತು ಬ್ರೂನೈಗಳಲ್ಲಿ ಈ ತಬ್ಲಿಘಿ ಜಮಾತ್ ಸದಸ್ಯರು ಕೊರೊನಾವನ್ನು ಹಬ್ಬಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ COVID-19 ರೋಗಿಗಳ ಸಂಖ್ಯೆ 2,883ಕ್ಕೆ ಏರಿತು. ಭಾನುವಾರ ಮಧ್ಯಾಹ್ನದವರೆಗೆ 40 ಸಾವುಗಳು ಸಂಭವಿಸಿವೆ. ಪಂಜಾಬ್‌ನಲ್ಲಿ ಅತಿ ಹೆಚ್ಚು1,196 ಪ್ರಕರಣಗಳಿದ್ದು, ಸಿಂಧ್‌ನಲ್ಲಿ 830 ಪ್ರಕರಣ ದಾಖಲಾಗಿವೆ.