ಗೋರಖ್‌ಪುರ(ಉತ್ತರ ಪ್ರದೇಶ): ಮಹಾರಾಷ್ಟ್ರದಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ 2 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಎರಡು ವಿಶೇಷ ರೈಲುಗಳು ಮೂಲಕ ಇಂದು ಕರೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಿವಾಂಡಿಯಿಂದ 1,145 ಪ್ರಯಾಣಿಕರನ್ನು ಹೊತ್ತ ಮೊದಲ ರೈಲು ಬೆಳಿಗ್ಗೆ ಗೋರಖ್‌ಪುರ ರೈಲು ನಿಲ್ದಾಣ ತಲುಪಿದೆ. 982 ಪ್ರಯಾಣಿಕರೊಂದಿಗೆ ವಾಸೈ ರಸ್ತೆ ರೈಲ್ವೆ ನಿಲ್ದಾಣದಿಂದ ಹೊರಟಿದ್ದ ಮತ್ತೊಂದು ರೈಲು ಬೆಳಿಗ್ಗೆ 5.30ರ ಸುಮಾರಿಗೆ ನಿಲ್ದಾಣಕ್ಕೆ ಬಂದಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಗೌರವ್ ಸಿಂಗ್ ಸೊಗರ್ವಾಲ್ ಹೇಳಿದ್ದಾರೆ.
ಈ ರೈಲಿನಲ್ಲಿ ಬಂದ ಬಹುತೇಕ ಪ್ರಯಾಣಿಕರು ಗೋರಖ್‌ಪುರ ಜಿಲ್ಲೆಯ ಖಜ್ನಿ, ಬನ್ಸ್‌ಗಾಂವ್ ಮತ್ತು ಗೋಲಾ ತಹಸಿಲ್ ಮೂಲದವರಾಗಿದ್ದು, ನಿಲ್ದಾಣಕ್ಕೆ ಬಂದ ನಂತರ ಸರಿಯಾದ ವೈದ್ಯಕೀಯ ತಪಾಸಣೆ ನಡೆಸಿ ಉತ್ತರ ಪ್ರದೇಶ ಸರ್ಕಾರ ವ್ಯವಸ್ಥೆ ಮಾಡಿದ್ದ ಬಸ್‌ಗಳಲ್ಲಿ ಅವರವರ ಸ್ಥಳಗಳಿಗೆ ಕಳುಹಿಸಲಾಯಿತು.
ಮಾರ್ಚ್ 25ರಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳನ್ನು ಸ್ಥಳಾಂತರಿಸಲು ರೈಲ್ವೆ ಇಲಾಖೆ ಶ್ರಮಿಕ್ ಎಂಬ ವಿಶೇಷ ರೈಲುಗಳನ್ನು ಬಿಟ್ಟಿದೆ.