ನವದೆಹಲಿ: ಕೊರೊನಾ ವೈರಸ್ ತಂದೊಡ್ಡಿರುವ ಸಂಕಷ್ಟದಿಂದಾಗಿ ದೇಶದಲ್ಲಿ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್‌ಗಳು ಮತ್ತು ಎನ್ 95 ಮುಖಗವಸುಗಳನ್ನು (ಮಾಸ್ಕ್) ತಯಾರಿಸಲಾಗುತ್ತಿದ್ದು, ಸ್ವದೇಶಿ ವೆಂಟಿಲೇಟರ್‌ಗಳ ಉತ್ಪಾದನೆಯೂ ಪ್ರಾರಂಭವಾಗಿದೆ ಮತ್ತು ಒಂಬತ್ತು ಕೈಗಾರಿಕಾ ಘಟಕಗಳ ಮೂಲಕ 59,000 ಕ್ಕೂ ಹೆಚ್ಚು ವೆಂಟಿಲೇಟರ್ಗಳನ್ನು ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್-19 ರ ಕುರಿತು ನಡೆದ ಮಂತ್ರಿಗಳ ಉನ್ನತ ಮಟ್ಟದ ಸಭೆಯಲ್ಲಿ ಆರೋಗ್ಯ ಸಚಿವಾಲಯವು ಈ ಮಾಹಿತಿ ನೀಡಿದ್ದು, ಈ ಹಿಂದೆ ಗುರುತಿಸಲ್ಪಟ್ಟ ದೇಶೀಯ ಉತ್ಪಾದನೆಗಳು, ರಕ್ಷಣಾ ಸಾಧನಗಳು (ಪಿಪಿಇ) ಕಿಟ್‌ಗಳು, ಫೇಸ್ ಮಾಸ್ಕ್ ಇತ್ಯಾದಿಗಳ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಈಗ ಲಭ್ಯವಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ದಿನದಲ್ಲಿ ದೇಶದಲ್ಲಿ ನಿತ್ಯ 1 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್‌ಗಳು ಮತ್ತು ಎನ್ 95 ಮಾಸ್ಕ್ಗಳನ್ನು ತಯಾರಿಸಲಾಗುತ್ತಿದೆ. ಪ್ರಸ್ತುತ 104 ದೇಶೀಯ ಕಾರ್ಖಾನೆಗಳು ಪಿಪಿಇ ಕಿಟ್‌ಗಳನ್ನು ತಯಾರಿಸುತ್ತಿದ್ದರೆ, ಮೂರು ಕಾರ್ಖಾನೆಗಳು ಎನ್- 95 ಮಾಸ್ಕ್ ತಯಾರಿಸುವಲ್ಲಿ ನಿರತವಾಗಿದೆ. ಇದಲ್ಲದೇ, ವೆಂಟಿಲೇಟರ್‌ಗಳ ಉತ್ಪಾದನೆಯನ್ನು ದೇಶೀಯ ಕಂಪನಿಗಳು ತಯಾರಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.