ನವದೆಹಲಿ:ಎರಡು ವಿವಿಐಪಿ ವಿಮಾನಗಳನ್ನು ಖರೀದಿಸಿದ ಬಗ್ಗೆ ಕೇಂದ್ರದ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ಬುಲೆಟ್ ಪ್ರೂಫ್ ಇಲ್ಲದ ಟ್ರಕ್‌ಗಳಲ್ಲಿ ಹುತಾತ್ಮರಾಗಲು ಸೈನಿಕರನ್ನು ಕಳುಹಿಸಲಾಗುತ್ತಿದೆ. ಆದರೆ ಪ್ರಧಾನಿಗಾಗಿ ವಿಮಾನಗಳನ್ನು ಖರೀದಿಸಲು ಸರ್ಕಾರ 8,400 ಕೋಟಿ ರೂ. ಖರ್ಚು ಮಾಡುತ್ತಿದೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ "ನಮ್ಮ ಸೈನಿಕರನ್ನು ಹುತಾತ್ಮರಾಗಲು ಬುಲೆಟ್ ಪ್ರೂಫ್ ಇಲ್ಲದ ಟ್ರಕ್‌ಗಳಲ್ಲಿ ಕಳುಹಿಸಲಾಗುತ್ತಿದೆ ಮತ್ತು ಪ್ರಧಾನಿಗಾಗಿ 8,400 ಕೋಟಿ ರೂ. ವಿಮಾನ.. ಇದು ನ್ಯಾಯವೇ?" ಎಂದಿದ್ದಾರೆ.
ಚಲಿಸುವ ವಾಹನದೊಳಗೆ ಕುಳಿತಿರುವ ಸೈನಿಕರು, ಬುಲೆಟ್ ಪ್ರೂಫ್ ಅಲ್ಲದ ಟ್ರಕ್ನಲ್ಲಿ ಜನರನ್ನು ಕಳುಹಿಸುವುದು ಎಷ್ಟು ಅಪಾಯಕಾರಿ ಎಂದು ಚರ್ಚೆ ಮಾಡುತ್ತಿರುವ ವಿಡಿಯೋವನ್ನು ರಾಹುಲ್ ಟ್ವೀಟ್ ಮಾಡಿದ್ದಾರೆ.
ವಿವಿಐಪಿ ವಿಮಾನ ವಿಚಾರದಲ್ಲಿ ರಾಹುಲ್ ಗಾಂಧಿ ಕಿಡಿ ಕಾರಿರುವುದು ಇದೇ ಮೊದಲೇನಲ್ಲ. ಕಳೆದ ವಾರ, ಪಂಜಾಬ್‌ನಲ್ಲಿ ನಡೆದ ರ್ಯಾಲಿಯಲ್ಲಿ ವಿವಿಐಪಿ ವಿಮಾನಗಳ ಖರೀದಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
"ಒಂದು ಕಡೆ, ಮೋದಿ 8,000 ಕೋಟಿ ರೂ. ಮೌಲ್ಯದ ಎರಡು ವಿಮಾನಗಳನ್ನು ಖರೀದಿಸಿದ್ದಾರೆ. ಮತ್ತೊಂದೆಡೆ, ಚೀನಾ ನಮ್ಮ ಗಡಿಯಲ್ಲಿದೆ ಮತ್ತು ನಮ್ಮ ಭದ್ರತಾ ಪಡೆಗಳು ಗಡಿಗಳನ್ನು ರಕ್ಷಿಸಲು ಕಠಿಣವಾದ ಶೀತವನ್ನು ಎದುರಿಸುತ್ತಿವೆ" ಎಂದು ಹೇಳಿದ್ದರು.