ನವದೆಹಲಿ: ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗೊಳ್ಳಲಿದೆ. ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಬಹಿಷ್ಕರಿಸಲು ಪ್ರತಿಪಕ್ಷಗಳುನಿರ್ಧರಿಸಿವೆ.
ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಸದನಗಳ ಜಂಟಿ ಸಭೆಯನ್ನು ಒಟ್ಟು 16 ವಿರೋಧ ಪಕ್ಷಗಳು ಬಹಿಷ್ಕರಿಸುತ್ತಿರುವುದಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕೇಂದ್ರ ಸರ್ಕಾರದ ಪಾತ್ರದ ಕುರಿತು ತನಿಖೆ ನಡೆಸುವಂತೆ 16 ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ವಿರೋಧ ಪಕ್ಷಗಳಲ್ಲಿ ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ, ಡಿಎಂಕೆ, ತೃಣಮೂಲ ಕಾಂಗ್ರೆಸ್, ಸಿಪಿಐ, ಸಿಪಿಐ-ಎಂ ಮತ್ತು ಆರ್‌ಜೆಡಿ ಸೇರಿವೆ. ದೆಹಲಿ ಹಿಂಸಾಚಾರದ ಜೊತೆಗೆ ಪೂರ್ವ ಲಡಾಕ್‌ನಲ್ಲಿ ಚೀನಾದೊಂದಿಗೆ ಡೆಡ್‌ಲಾಕ್ ಸಮಸ್ಯೆ, ಆರ್ಥಿಕತೆಯ ಸ್ಥಿತಿ, ಹಣದುಬ್ಬರ ಮತ್ತು ಇತರ ವಿಷಯಗಳನ್ನೂ ಸಂಸತ್ತಿನಲ್ಲಿ ಪ್ರಸ್ತಾಪಿಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ.
ದೇಶದ ಸಂಸತ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಈ ಬಾರಿಗೆ ಕಾಗದರಹಿತ ಮುಂಗಡಪತ್ರ ಮಂಡನೆಯಾಗುತ್ತಿದ್ದು, ಫೆ. 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯಸಭಾ ಕಲಾಪ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಹಾಗೂ ಲೋಕಸಭೆಯ ಕಾರ್ಯಕಲಾಪ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಡೆಯಲಿದೆ.
ಸಂಸತ್ ಅಧಿವೇಶನವು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತವು ಇಂದಿನಿಂದ ಫೆಬ್ರವರಿ 15ರವರೆಗೆ ಇರಲಿದೆ. ಎರಡನೇ ಹಂತದ ಅಧಿವೇಶನವು ಮಾರ್ಚ್ 8ರಿಂದ ಏ. 8ರವರೆಗೆ ನಡೆಯುತ್ತದೆ.