ಪಣಜಿ(ಗೋವಾ): ನಮ್ಮ ರಾಜ್ಯದ ನಾಗರೀಕರೆಲ್ಲರೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಲು ಸಿದ್ಧರಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಸಿಎಎ ಬಗ್ಗೆ ಅಪಪ್ರಚಾರ ನಡೆಸಿ ಜನರಲ್ಲಿ ಈ ಕಾಯ್ದೆ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಸಿಎಎ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿವೆ: ಪ್ರಮೋದ್ ಸಾವಂತ್ - ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಕಾಯ್ದೆ ಸ್ವಾಗತಾರ್ಹವಾಗಿದ್ದು, ಈ ಕಾಯ್ದೆಯನ್ನು ಜನರೂ ಸಹ ಒಪ್ಪಿಕೊಳ್ಳಲು ತಯಾರಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಈ ಕಾಯ್ದೆ ಬಗ್ಗೆ ಅಪಪ್ರಚಾರ ನಡೆಸಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿವೆ ಎಂದು ಗೋವಾ ಮುಖ್ಯಮಂತ್ರಿ ಸಾವಂತ್ ಆರೋಪಿಸಿದ್ದಾರೆ.
ಈ ಕಾಯ್ದೆಯಲ್ಲಿ ಆಕ್ಷೇಪಾರ್ಹವಾದುದು ಏನೂ ಇಲ್ಲ. ಬಿಜೆಪಿಯ 15 ಶಾಸಕರು ಹಾಗೂ ಇಲ್ಲಿನ ಪ್ರಜ್ಞಾವಂತ ಜನರು ಇದನ್ನು ಒಪ್ಪಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಇತರೆ ಪ್ರತಿಪಕ್ಷಗಳು ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈ ಬಗ್ಗೆ ಅಪಪ್ರಚಾರ ನಡೆಸುತ್ತಿವೆ. ಕಾಂಗ್ರೆಸ್ ಪಕ್ಷದವರಿಗೂ ಸಹ ಸಿಎಎ ಬಗೆಗಿನ ನಿಜವಾದ ಅಂಶಗಳು ತಿಳಿದಿವೆ. ಇದರ ಆಗುಹೋಗುಗಳು ಸಹ ಅವರಿಗೆ ಗೊತ್ತಿರುವಂತಹದ್ದು. ಆದರೆ ಜನರ ದಿಕ್ಕು ತಪ್ಪಿಸುವ ಸಲುವಾಗಿ ಈ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಸಾವಂತ್ ಕಿಡಿಕಾರಿದ್ದಾರೆ.
ಸಿಎಎ ಜಾರಿಗೆ ತಂದಿರುವುದಕ್ಕಾಗಿ ಗೋವಾ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಸೋಮವಾರ ಅಭಿನಂದನಾ ಪತ್ರವನ್ನು ಸಲ್ಲಿಸಿದೆ ಎಂದ ಸಾವಂತ್, ಅಭಿನಂದನಾ ಪತ್ರ ಸಲ್ಲಿಸುವುದಕ್ಕೂ ಕಾಂಗ್ರೆಸ್ ಸದನದಲ್ಲಿ ಗದ್ದಲವನ್ನುಂಟು ಮಾಡಿದೆ. ಈ ಬಗ್ಗೆ ಎರಡೂವರೆ ಗಂಟೆಗಳ ಕಾಲ ಚರ್ಚೆ ನಡೆದಿತ್ತು ಎಂದು ಹೇಳಿದ್ದಾರೆ.