ನವದೆಹಲಿ:ದೇಶದಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.
ದೇಶದಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ದಿನದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು.
ಬಾಹ್ಯಾಕಾಶ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದರಿಂದ ನಮ್ಮ ಯುವಕರಿಗೆ ಅನೇಕ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಮತ್ತು ಅವರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಮಾರ್ಗಗಳನ್ನು ಒದಗಿಸಿದಂತಾಗುತ್ತದೆ " ಎಂದು ಹೇಳಿದರು.
"ಇಡೀ ಜಗತ್ತು ಒಂದೇ ಕುಟುಂಬ ಎಂದು ಭಾರತ ನಂಬಿದೆ. ನಾವು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದರೂ ಈ ಪ್ರಕ್ರಿಯೆಯಲ್ಲಿ ಮತ್ತು ನಮ್ಮ ಪ್ರಯಾಣದಲ್ಲಿ ಮಾನವೀಯತೆಯನ್ನು ಸದಾ ಉಳಿಸಿಕೊಳ್ಳಬೇಕು". ಈ ಕನಸನ್ನು ಭಾರತ ನನಸಾಗಿಸುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತೀಯರ ಸಾಮರ್ಥ್ಯದ ಮೇಲೆ ನನಗೆ ವಿಶ್ವಾಸವಿದೆ. ಒಮ್ಮೆ ನಮ್ಮವರು ಏನಾದರೂ ಮಾಡಲು ನಿರ್ಧರಿಸಿದರೆ ಆ ಗುರಿಯನ್ನು ಸಾಧಿಸುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ." ಎಂದು ನೆರೆದವರನ್ನು ಹುರಿದುಂಬಿಸಿದರು.
ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಕುರಿತು ಮಾತನಾಡಿದ ಪಿಎಂ ಮೋದಿ, ಕಳೆದ ವರ್ಷ ನಮ್ಮ ದೇಶಕ್ಕೆ ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯಲ್ಲಿ ದಾಖಲೆಯ 18% ಹೆಚ್ಚಳವಾಗಿದೆ. ನಮ್ಮ ನೀತಿಗಳು, ಪ್ರಜಾಪ್ರಭುತ್ವ ಮತ್ತು ನಮ್ಮ ಆರ್ಥಿಕತೆಯ ಅಡಿಪಾಯವನ್ನು ಬಲಪಡಿಸುವ ಬಗ್ಗೆ ನಾವು ಕೆಲಸ ಮಾಡಿದ್ದರಿಂದ ಜಗತ್ತು ಭಾರತದ ಮೇಲೆ ವಿಶ್ವಾಸ ತೋರುತ್ತಿದೆ ಎಂದರು.
ಕೃಷಿ ಕ್ಷೇತ್ರ ಮತ್ತು ಭಾರತದ ರೈತರ ಮೇಲೆ ಕೇಂದ್ರೀಕರಿಸಿ ಮಾತನಾಡಿದ ಮೋದಿ, "ಆತ್ಮ ನಿರ್ಭರ ಭಾರತ್"ನ ಪ್ರಮುಖ ಆದ್ಯತೆಯೆಂದರೆ ಆತ್ಮ ನಿರ್ಭರ ಕೃಷಿ ಮತ್ತು ಆತ್ಮ ನಿರ್ಭರ ರೈತ. ದೇಶದ ರೈತರಿಗೆ ಆಧುನಿಕ ಮೂಲ ಸೌಕರ್ಯ ಒದಗಿಸಲು 1 ಲಕ್ಷ ಕೋಟಿ ರೂ.ಗಳ 'ಕೃಷಿ ಮೂಲ ಸೌಕರ್ಯ ನಿಧಿ' ರಚಿಸಲಾಗಿದೆ" ಎಂದರು.
"ನಾವು ಮೇಕ್ ಇನ್ ಇಂಡಿಯಾ" ಮತ್ತು 'ಮೇಕ್ ಫಾರ್ ವರ್ಲ್ಡ್' ಮಂತ್ರದೊಂದಿಗೆ ಮುಂದುವರಿಯಬೇಕಾಗಿದೆ". ಸ್ವಾವಲಂಬಿ ಭಾರತ ಎಂದರೆ ಆಮದು ಕಡಿಮೆ ಮಾಡುವುದು ಮಾತ್ರವಲ್ಲ, ನಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವುದು ಎಂದು ಪ್ರಧಾನಿ ಹೇಳಿದರು.