ಜಬುವಾ (ಮಧ್ಯಪ್ರದೇಶ):ರಾಜಧಾನಿ ಭೋಪಾಲ್ನಿಂದ 7 ಗಂಟೆಗಳ ಪ್ರಯಾಣ ಮಾಡಿದ್ರೆ ಜಬುವಾ ಜಿಲ್ಲೆ ಸಿಗುತ್ತದೆ. ಬುಡಕಟ್ಟು ಸಮುದಾಯದ ಜನರೇ ಹೆಚ್ಚಿರುವ ಈ ಜಿಲ್ಲೆ, ಅಭಿವೃದ್ಧಿ ವಿಚಾರದಲ್ಲಿ ದೂರವೇ ಉಳಿದಿದೆ. ಸರ್ಕಾರದ ಸೇವೆಗಳು ಇಲ್ಲಿಗೆ ತಲುಪುವುದೇ ಆಮೆ ನಡಿಗೆಯಲ್ಲಿ. ಹೀಗಿರುವಾಗ ಸರ್ಕಾರದ ಎಲ್ಲಾ ಯೋಜನೆಗಳು ಇಲ್ಲಿಗೆ ತಲುಪುತ್ತೆ ಅನ್ನೋದನ್ನು ನಿರೀಕ್ಷೆ ಮಾಡುವುದು ಕಷ್ಟದ ಮಾತು.
ಜಬುವಾ ಜಿಲ್ಲೆಯ ಸಾಕ್ಷರತೆ ಪ್ರಮಾಣ ಕೇವಲ ಶೇ 43.3ರಷ್ಟಿದೆ. ಶಿಕ್ಷಣ ಕ್ಷೇತ್ರದಲ್ಲಿ ಈ ಜಿಲ್ಲೆ ಎಷ್ಟು ಹಿಂದುಳಿದಿದೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ. ಸದ್ಯ ಕೊರೊನಾ ಲಾಕ್ಡೌನ್ ಬಳಿಕ ಶಾಲಾ-ಕಾಲೇಜುಗಳ ಬಾಗಿಲು ಮುಚ್ಚಿದ್ದು, ಸರ್ಕಾರ ಆನ್‌ಲೈನ್ ಶಿಕ್ಷಣವನ್ನು ಜಾರಿಗೆ ತಂದಿದೆ. ಆದ್ರೆ ಎರಡು ಹೊತ್ತಿನ ಊಟಕ್ಕೂ ಒದ್ದಾಡುತ್ತಿರುವ ಇಲ್ಲಿನ ಜನರು ತಮ್ಮ ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಬೇಕಾದ ಸಲಕರಣೆಗಳನ್ನು ಖರೀದಿಸಲು ಒದ್ದಾಡುತ್ತಿದ್ದಾರೆ.
ಇಲ್ಲಿನ ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ಅಪಾರ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಆನ್‌ಲೈನ್ ತರಗತಿಗಳಿಗೆ ಬೇಕಾದ ಸಂಪನ್ಮೂಲಗಳೇ ಇಲ್ಲದೇ ಇರುವುದರಿಂದ ತಮ್ಮ ಕನಸುಗಳ ಬೆನ್ನೇರುವಲ್ಲಿ ಅಸಮರ್ಥರಾಗಿದ್ದಾರೆ. ನಗರ ಪ್ರದೇಶಗಳಿಗೆ ಶರವೇಗದಲ್ಲಿ ಒಗ್ಗಿಕೊಳ್ಳುತ್ತಿರುವ ಆನ್‌ಲೈನ್ ತರಗತಿಗಳು ಗ್ರಾಮೀಣ ಪ್ರದೇಶ ಬಂದಾಗ ಆಮೆ ನಡಿಗೆಯಲ್ಲಿ ಸಾಗುತ್ತದೆ. ಜಬುವಾ ಜಿಲ್ಲೆಯಲ್ಲೂ ಸದ್ಯ ಎದುರಾಗಿರುವ ಪರಿಸ್ಥಿತಿ ಇದೇ. ನಮ್ಮಲ್ಲಿ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ಗಳು ಇಲ್ಲ ಎಂದು ಇಲ್ಲಿನ ಮಕ್ಕಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ, ಆನ್‌ಲೈನ್ ಶಿಕ್ಷಣಕ್ಕೆ ಬೇಕಾದ ಮೊಬೈಲ್ ಸೌಲಭ್ಯವಿದ್ದರೂ, ಇಂಟರ್ನೆಟ್ ವ್ಯವಸ್ಥೆ ಇಲ್ಲದೆ ಇಲ್ಲಿನ ಮಕ್ಕಳ ಕಲಿಕೆಗೆ ಭಾರಿ ಪೆಟ್ಟು ಬಿದ್ದಿದೆ.