ಕೊರಪುತ್(ಒಡಿಶಾ): ಬೆಟ್ಟ ಮತ್ತು ಕಾಡುಗಳಿಂದ ಆವೃತವಾದ ಕೊರಾಪುತ್ ಜಿಲ್ಲೆಯಲ್ಲಿ ಹೆಚ್ಚಾಗಿ ಬುಡಕಟ್ಟು ಸಮುದಾಯದ ಜನರು ವಾಸಿಸುತ್ತಿದ್ದಾರೆ. ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಇಲ್ಲಿನ ಜನರು ಪ್ರತಿದಿನ ಬದುಕಲು ಹೆಣಗಾಡುತ್ತಿದ್ದಾರೆ. ಇದರ ನಡುವೆ ಬಿದ್ದಿರುವ ಕೋವಿಡ್ ಹೊಡೆತ ಇವರ ಜೀವನದಲ್ಲೇ ಜಿಗುಪ್ಸೆ ತಂದಿಟ್ಟಿದೆ.
ಕನಸಿನ ಮಾತಾದ ಆನ್‌ಲೈನ್ ಶಿಕ್ಷಣ ಹೌದು, ಕೊರಪುತ್ ಜಿಲ್ಲೆಯ ಬುಡಕಟ್ಟು ಜನರು ಸರ್ಕಾರದ ಸೌಲಭ್ಯಗಳಿಂದ ದೂರವೇ ಉಳಿದಿದ್ದಾರೆ. ಇವರಿಗೆ ಬದುಕಿನ ಬಂಡಿ ಸಾಗಿಸುವುದೇ ದೊಡ್ಡ ಸವಾಲಾಗಿಬಿಟ್ಟಿದೆ. ಬದುಕಿಗೆ ಅನಿವಾರ್ಯವಾಗಿರೋ ಮೂಲ ಸೌಲಭ್ಯವೇ ಇಲ್ಲದೇ ಒದ್ದಾಡುತ್ತಿರುವ ಇವರಿಗೆ ಈಗ ತಮ್ಮ ಮಕ್ಕಳ ಚಿಂತೆ. ಕೈಯಲ್ಲೊಂದು ಮೊಬೈಲ್ ಫೋನ್ ಹಿಡಿದು ಸಂವಹನ ನಡೆಸುವುದೇ ಕಷ್ಟವಾಗಿರುವಾಗ, ತಮ್ಮ ಮಕ್ಕಳಿಗೆ ಮೊಬೈಲ್ ಫೋನ್ ಕೊಡಿಸಿ, ಇಂಟರ್ನೆಟ್ ಸೌಲಭ್ಯ ಕಲ್ಪಿಸಿ, ಆನ್‌ಲೈನ್ ಶಿಕ್ಷಣಕ್ಕೆ ಮಕ್ಕಳನ್ನು ತಯಾರು ಮಾಡುವುದು ಕನಸಿನ ಮಾತೆಂಬಂತಾಗಿದೆ.
ಇಲ್ಲಿನ ಜನರ ಬಳಿ ಕಡಿಮೆ ಬೆಲೆಯ ಸಾಮಾನ್ಯ ಮೊಬೈಲ್ ಫೋನೇ ಇಲ್ಲ. ಇನ್ನು ಸ್ಮಾರ್ಟ್ ಫೋನ್ ಅಂದ್ರೆ ಏನೂ ಅಂತಾನೇ ಇಲ್ಲಿನ ಜನರಿಗೆ ಗೊತ್ತಿಲ್ಲ. ಹೀಗಿರುವಾಗ ಮಕ್ಕಳಿಗೆ ಆನ್‌ಲೈನ್ ಪಾಠ ಕೊಡಿಸಬೇಕೆಂಬ ಸರ್ಕಾರದ ಸಂದೇಶವನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಹೇಳಿ? ಹೀಗಾಗಿ ಇಲ್ಲಿನ ಮುಗ್ಧ ಬುಡಕಟ್ಟು ಜನರು, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ನಡೆಸಿದ್ದಾರೆ.
ಜಗತ್ತು ಈಗ ಡಿಜಿಟಲ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಹೀಗಾಗಿಯೇ ಕೋವಿಡ್ ಪರಿಸ್ಥಿತಿಯಿಂದ ಹೇರಿದ ಲಾಕ್ಡೌನ್ಗೆ ಸೆಡ್ಡು ಹೊಡೆದು ಮಕ್ಕಳಿಗೆ ಆನ್‌ಲೈನ್ ಶಿಕ್ಷಣವನ್ನು ನೀಡಲಾಗುತ್ತದೆ. ಆದರೆ, ಈ ವ್ಯವಸ್ಥೆಯ ನಿಜವಾದ ಯಶಸ್ಸಿನ ಬಗ್ಗೆ ಸರ್ಕಾರವಾಗಲಿ, ಜನನಾಯಕರಾಗಲಿ ಗಮನಿಸುತ್ತಿಲ್ಲ.
ಕೊರಪುತ್ನಂತಹ ಹಿಂದುಳಿದ ಜಿಲ್ಲೆಯ ಎಲ್ಲ ಮಕ್ಕಳಿಗೂ ಆನ್‌ಲೈನ್ ಶಿಕ್ಷಣವನ್ನು ವಿಸ್ತರಿಸುವುದು ಪ್ರಾಯೋಗಿಕವಾಗಿ ಅಸಾಧ್ಯ. ಇಲ್ಲಿನ ಮಕ್ಕಳಿಗೆ ಮೊಬೈಲ್ ಫೋನ್‌ಗಳ ತೀವ್ರ ಕೊರತೆ ಇದೆ. ಇದಕ್ಕೆ ಬಡತನ ಮತ್ತು ಆಧುನಿಕ ಜಗತ್ತಿನೆಡೆಗೆ ತೆರೆದುಕೊಳ್ಳದಿರುವುದು ಒಂದು ಕಾರಣವಾದರೆ, ಸರ್ಕಾರದ ನಿರ್ಲಕ್ಷ್ಯ ಇನ್ನೊಂದು ಪ್ರಮುಖ ಕಾರಣ. ಇಂತಹ ಸಂದರ್ಭಗಳಲ್ಲಿ ಈ ಮಕ್ಕಳು ಆನ್‌ಲೈನ್ ಮೂಲಕ ಅಧ್ಯಯನ ಮಾಡುವುದು ಕಷ್ಟ. ಮತ್ತೊಂದೆಡೆ ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುತ್ತಾ ಹೋದರೂ 60ರಿಂದ 70 ಶೇ. ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ಜಿಲ್ಲಾ ಶಿಕ್ಷಣಾಧಿಕಾರಿ ಒಪ್ಪಿಕೊಂಡಿದ್ದಾರೆ.
ಸದ್ಯ ಇಲ್ಲಿನ ಶಿಕ್ಷಣಾಧಿಕಾರಿಗಳು ಮಕ್ಕಳ ಆನ್‌ಲೈನ್ ಕಲಿಕೆಗೆ ಬೇಕಾದ ವ್ಯವಸ್ಥೆಯನ್ನು ಮಾಡಲು ಮುಂದಾಗಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.