ಹೈದರಾಬಾದ್:ತ್ರಿವಳಿ ತಲಾಖ್ ನಿಷೇಧವಾಗಿ ಇಂದಿಗೆ ಒಂದು ವರ್ಷ. ಆಗಸ್ಟ್ 1, 2019ರಂದು ತ್ರಿವಳಿ ತಲಾಖ್ ಕಾನೂನು ಬಾಹಿರ ಎಂದು ಕಾನೂನು ಜಾರಿಗೆ ಬಂತು. ಇದನ್ನು ನರೇಂದ್ರ ಮೋದಿ ಸರ್ಕಾರವು ಮೇ 18, 2017ರ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಜಾರಿಗೆ ತಂದಿತು.
ಇದರಿಂದಾಗಿ ತಲಾಖ್ - ಇ - ಬಿಡ್ಡತ್ ಅಥವಾ ಯಾವುದೇ ರೀತಿಯ ತಲಾಖ್ ಅನ್ನು ಕಾನೂನು ಬಾಹಿರ ಎಂದು ಘೋಷಿಸಲಾಯಿತು. ತನ್ನ ಹೆಂಡತಿಗೆ ತಲಾಖ್ ಎಂದು ಉಚ್ಚರಿಸುವ ಯಾವುದೇ ಮುಸ್ಲಿಂ ಪತಿ ಮೂರು ವರ್ಷಗಳ ಅವಧಿಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕಾನೂನು ಜಾರಿಗೆ ತರಲಾಗಿದೆ. 2011ರ ಜನಗಣತಿಯ ಪ್ರಕಾರ, ಭಾರತದ ಜನಸಂಖ್ಯೆಯಲ್ಲಿ ಶೇ 8ರಷ್ಟು ಮುಸ್ಲಿಂ ಮಹಿಳೆಯರು ಇದ್ದಾರೆ.
ತ್ರಿವಳಿ ತಲಾಖ್ ಕಾನೂನುಬಾಹಿರ ಎಂದು ಹೇಳುವ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆ, 2019ರ ಅಂಗೀಕಾರದ ವಿವಿಧ ಹಂತಗಳು ಇಲ್ಲಿವೆ:
ಅಕ್ಟೋಬರ್ 16, 2015: ಹಿಂದೂ ಉತ್ತರಾಧಿಕಾರದ ಪ್ರಕರಣವೊಂದರಲ್ಲಿ ವ್ಯವಹರಿಸುವಾಗ ಮುಸ್ಲಿಂ ಮಹಿಳೆಯರು ವಿಚ್ಛೇದನ ಪ್ರಕರಣಗಳಲ್ಲಿ ಲಿಂಗ ತಾರತಮ್ಯ ಎದುರಿಸುತ್ತಾರೆಯೇ ಎಂದು ಪರೀಕ್ಷಿಸಲು ಸೂಕ್ತ ನ್ಯಾಯಪೀಠವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಸಲಹೆ ನೀಡಿತು.
ಫೆಬ್ರವರಿ 2016: ಶಯಾರಾ ಬಾನೊ ಅವರು ಸಲ್ಲಿಸಿದ ಅರ್ಜಿಯಲ್ಲಿ, ಉತ್ತರಾಖಂಡದಲ್ಲಿರುವ ತನ್ನ ಹೆತ್ತವರ ಮನೆಗೆ ವೈದ್ಯಕೀಯ ಚಿಕಿತ್ಸೆಗಾಗಿ ಶಯಾರಾ ಭೇಟಿ ನೀಡಿದ್ದಾಗ, ಆಕೆಯ ಪತಿ ತಲಾಖ್ ನೀಡುತ್ತಿದ್ದೇನೆ ಎಂದು ಹೇಳುವ ಪತ್ರವನ್ನು ಕಳುಹಿಸುತ್ತಾನೆ. ಅಲಹಾಬಾದ್ನಲ್ಲಿ ವಾಸಿಸುವ ತನ್ನ ಪತಿಯನ್ನು ಭೇಟಿಯಾಗಲು ಆಕೆ ಹೋದಾಗ ಪತಿ ಹಾಗೂ ಮಕ್ಕಳನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ ಎಂದು ಉಲ್ಲೇಖಿಸಲಾಗಿತ್ತು.
ಫೆಬ್ರವರಿ 5, 2016: 'ತ್ರಿವಳಿ ತಲಾಖ್', 'ನಿಖಾ ಹಲಾಲಾ' ಮತ್ತು 'ಬಹುಪತ್ನಿತ್ವ'ದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯ ಕುರಿತು ಸಹಾಯ ಮಾಡಲು ಸುಪ್ರೀಂಕೋರ್ಟ್ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರನ್ನು ಕೇಳಿತು.
ಮಾರ್ಚ್ 28, 2016:'ಮಹಿಳೆಯರು ಮತ್ತು ಕಾನೂನು: ಮದುವೆ, ವಿಚ್ಚೇದನ, ಪಾಲನೆ, ಆನುವಂಶಿಕತೆ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಕೇಂದ್ರೀಕರಿಸಿ ಕುಟುಂಬ ಕಾನೂನುಗಳ ಮೌಲ್ಯಮಾಪನ' ಕುರಿತು ಉನ್ನತ ಮಟ್ಟದ ಸಮಿತಿಯ ವರದಿಯನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚಿಸಿತು.
ಜೂನ್ 29, 2016: ಮುಸ್ಲಿಮರಲ್ಲಿ 'ತ್ರಿವಳಿ ತಲಾಖ್' ಅನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಪರೀಕ್ಷಿಸಲಾಗುವುದು ಎಂದು ಸುಪ್ರೀಂ ಹೇಳಿತು.
ಅಕ್ಟೋಬರ್ 7, 2016: ಭಾರತದ ಸಾಂವಿಧಾನಿಕ ಇತಿಹಾಸದಲ್ಲಿ ಮೊದಲ ಬಾರಿಗೆ ಕೇಂದ್ರವು ಈ ಪದ್ಧತಿಗಳನ್ನು ಸುಪ್ರೀಂ ಕೋರ್ಟ್ನಲ್ಲಿ ವಿರೋಧಿಸಿತು ಮತ್ತು ಲಿಂಗ ಸಮಾನತೆ ಮತ್ತು ಜಾತ್ಯತೀತತೆಯಂತಹ ಆಧಾರದ ಮೇಲೆ ಒಲವು ತೋರಿತು.
ಫೆಬ್ರವರಿ 14, 2017: ಸುಪ್ರೀಂಕೋರ್ಟ್ ವಿವಿಧ ವಿಷಯಗಳ ನಡುವೆ ಮುಖ್ಯ ಮನವಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು.
ಫೆಬ್ರವರಿ 16, 2017: ತ್ರಿವಳಿ ತಲಾಖ್ ಮತ್ತು ನಿಖಾ ಹಲಾಲ್ಗೆ ಸಂಬಂಧಿಸಿದ ಸವಾಲುಗಳನ್ನು ಚರ್ಚಿಸಲು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವನ್ನು ಸುಪ್ರೀಂಕೋರ್ಟ್ ರಚಿಸಿತು.
ಮಾರ್ಚ್ 2017:ತ್ರಿವಳಿ ತಲಾಖ್ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್ನಲ್ಲಿ ವಾದಿಸಿತು.
ಮೇ 18, 2017:ತ್ರಿವಳಿ ತಲಾಖ್ನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಮೇಲ್ಮನವಿಗಳ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿತು.
ಆಗಸ್ಟ್ 22, 2017: ತ್ರಿವಳಿ ತಲಾಖ್ ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಘೋಷಿಸಿತು. ಕಾನೂನನ್ನು ರೂಪಿಸಲು ಕೇಂದ್ರವನ್ನು ಕೇಳಿತು.