ಕರ್ನಾಟಕ

karnataka

By

Published : Feb 14, 2020, 6:10 AM IST

ETV Bharat / bharat

ಭೀಕರ ಪುಲ್ವಾಮಾ ದಾಳಿಗೆ ಒಂದು ವರ್ಷ... ಆ ಕರಾಳ ದಿನದ ಬಗ್ಗೆ ಒಂದಷ್ಟು ಮಾಹಿತಿ !

ಭಾರತವನ್ನೇ ಕಣ್ಣೀರಿಡುವಂತೆ, ಕೋಪ ತರಿಸುವಂತೆ ಮಾಡಿದ್ದ 2019 ರ ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಇಂದು ಒಂದು ವರ್ಷವಾಗಿದೆ. ಈ ಘಟನೆಯ ಕಹಿ ನೆನಪುಗಳು ಹೀಗಿವೆ.

One year of Pulwama
ಪುಲ್ವಾಮಾ ದಾಳಿ

ನವದೆಹಲಿ: ಫೆಬ್ರವರಿ 14, ಭಾರತದ ಇತಿಹಾಸದಲ್ಲೇ ಒಂದು ಕರಾಳ ದಿನ. 2019 ರಲ್ಲಿ ಈ ದಿನದಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್​ಪಿಎಫ್ ಸಿಬ್ಬಂದಿಗಳು ಹುತಾತ್ಮರಾಗಿದ್ದರು.

ಅಂದು 2,547 ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಹೊತ್ತು 78 ಬೆಂಗಾವಲು ವಾಹನಗಳು ಜಮ್ಮುವಿನಿಂದ ಶ್ರೀನಗರಕ್ಕೆ ಬರುತ್ತಿದ್ದವು. ಈ ವೇಳೆ ಪುಲ್ವಾಮಾ ಜಿಲ್ಲೆಯ ಲೆಥ್‌ಪೋರಾ ಪ್ರದೇಶದ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ದಾಳಿ ನಡೆಸಲಾಗಿತ್ತು. ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಶ್-ಎ-ಮುಹಮ್ಮದ್ (ಜೆಎಂ) ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದ್ದು, ಫಿದಾಯಿನ್​ ದಾಳಿ ಇದಾಗಿತ್ತು.

ಪುಲ್ವಾಮಾ ದಾಳಿಗೆ ಒಂದು ವರ್ಷ

ಇದು 1989 ರ ಬಳಿಕ ನಡೆದ ಭೀಕರ ಭಯೋತ್ಪಾದಕ ದಾಳಿಯಾಗಿತ್ತು. ಸ್ಫೋಟವು ಎಷ್ಟು ದೊಡ್ಡದಾಗಿತ್ತೆಂದರೆ ಅದರ ಶಬ್ದವು 10 ಕಿ.ಮೀ ದೂರದ ವರೆಗೆ ಕೇಳಿಸಿತ್ತು. ದಾಳಿಯ ನಂತರ ಜೆಎಂ ಬಿಡುಗಡೆ ಮಾಡಿದ ವಿಡಿಯೋ ಮೂಲಕ ದಾಳಿ ನಡೆಸಿದ ವ್ಯಕ್ತಿಯನ್ನು ಪುಲ್ವಾಮಾ ಜಿಲ್ಲೆಯ ಕಾಕಪೋರಾ ಪಟ್ಟಣದ ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಯಿತು.

ದಾಳಿಗೆ ಭಾರತವೇ ಕಣ್ಣೀರು

40 ಯೋಧರ ಶವಗಳನ್ನು ಶ್ರೀನಗರದಿಂದ ದೆಹಲಿಯ ಪಾಲಂ ವಾಯುನೆಲೆಗೆ ವಿಶೇಷ ವಿಮಾನದಲ್ಲಿ ಸಾಗಿಸಲಾಯಿತು. ದಾಳಿ ನಡೆದ ಒಂದು ದಿನದ ನಂತರ, ಅಂದರೆ ಫೆ.15 ರಂದು ಯೋಧರ ಅರೆಬರೆ ಶವಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಾಲಾರ್ಪಣೆ ಮಾಡಿ ಹಾಗೂ ರಾಜಕೀಯ ಗಣ್ಯರು, ಸಶಸ್ತ್ರ ಪಡೆಗಳ ಮುಖ್ಯಸ್ಥರು ಗೌರವ ಸಲ್ಲಿಸಿದ್ದರು.

ನೋವಿನಲ್ಲಿ ಹುತಾತ್ಮ ಯೋಧರ ಕುಟುಂಬಗಳು

ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇಡೀ ಭಾರತ ಕಾಯುತ್ತಿತ್ತು. ದಾಳಿ ನಡೆದ 12 ದಿನಗಳ ನಂತರ, ಅಂದರೆ ಫೆ.26ರ ಮುಂಜಾನೆ ಪಾಕ್‌ ಆಕ್ರಮಿತ ಪ್ರದೇಶವಾದ ಬಾಲಾಕೋಟ್​ನಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿ ಅತಿ ಹೆಚ್ಚು ಸಂಖ್ಯೆಯ ಭಯೋತ್ಪಾದಕರನ್ನು ಹತ್ಯೆಮಾಡಿತ್ತು. ಆದರೆ ಈ ಬಳಿಕ ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ದೇಶಕ್ಕೆ ಮರಳಿ ಬಂದಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌

ಫೆ.27 ರಂದು ವಾಯುಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವನ್ನು ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌, ಮಿಗ್‌-21 ಯುದ್ಧ ವಿಮಾನದ ಮೂಲಕ ಹೊಡೆದುರುಳಿಸಿದ್ದರು. ಆದರೆ, ಅಭಿನಂದನ್‌ ಅವರ ಫೈಟರ್‌ ಜೆಟ್‌ ಪತನಗೊಂಡು ಪಾಕ್​ ವಶದಲ್ಲಿದ್ದರು. ಹೈಡ್ರಾಮ ನಡೆಸಿದ ಪಾಕ್​ 60 ಗಂಟೆಗಳ ಬಳಿಕ ಅಭಿನಂದನ್​ರನ್ನು ಭಾರತಕ್ಕೆ ಕಳುಹಿಸಿಕೊಟ್ಟಿತ್ತು.

ಇದೀಗ ಫೆ.14 ರ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಇಂದು ಒಂದು ವರ್ಷವಾಗಿದ್ದು, ಇಡೀ ದೇಶವೇ ಘಟನೆಯನ್ನ ನೆನಪಿಸಿಕೊಳ್ಳುತ್ತಾ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತಿದೆ.

ABOUT THE AUTHOR

...view details