ಹೈದರಾಬಾದ್: ಕೊರೊನಾ ವೈರಸ್ ಮಹಾಮಾರಿಯು ಇದುವರೆಗೆ ಜಾಗತಿಕವಾಗಿ 5 ಲಕ್ಷ ಜೀವಗಳನ್ನು ಬಲಿ ಪಡೆದಿದೆ. ಚೀನಾದ ವುಹಾನ್ ನಗರದ ವನ್ಯಜೀವಿ ಆಹಾರ ಮಾರುಕಟ್ಟೆಯಲ್ಲಿ ಹುಟ್ಟಿದ ಈ ವೈರಸ್ ಸದ್ಯ ಜಗತ್ತನ್ನೇ ತಲ್ಲಣಗೊಳಿಸಿದೆ.
ಪ್ರಾಣಿಗಳಿಂದ ಮಾನವರ ದೇಹ ಪ್ರವೇಶಿಸಿ ವ್ಯಾಪಕವಾಗಿ ಹರಡುವ ಕೋವಿಡ್-19 ನಂಥ 'ಪ್ರಾಣಿಜನ್ಯ ರೋಗಗಳು' (zoonotic disease) ಸಾಂಕ್ರಾಮಿಕವಾಗಿ ಪಸರಿಸಲು ಹವಾಮಾನ ಬದಲಾವಣೆ, ಪ್ರಕೃತಿಯ ವಿನಾಶ ಹಾಗೂ ವನ್ಯಜೀವಿಗಳ ಮೇಲಿನ ದೌರ್ಜನ್ಯಗಳೇ ಕಾರಣವಾಗಿವೆ.
ಪ್ರಾಣಿಗಳಿಂದ ಮಾನವರಿಗೆ ಹರಡುವ ಕಾಯಿಲೆಗಳನ್ನು “zoonotic disease” ಅಥವಾ “zoonosis” (ಪ್ರಾಣಿಜನ್ಯ) ಕಾಯಿಲೆ ಎನ್ನುತ್ತಾರೆ.
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ಮತ್ತು ಅಂತರರಾಷ್ಟ್ರೀಯ ಜಾನುವಾರು ಸಂಶೋಧನಾ ಸಂಸ್ಥೆ (ಐಎಲ್‌ಆರ್‌ಐ) ಯ ವರದಿಯ ಪ್ರಕಾರ ಹವಾಮಾನ ಬದಲಾವಣೆ, ಪ್ರಕೃತಿಯ ವಿನಾಶ ಹಾಗೂ ವನ್ಯಜೀವಿಗಳ ಮೇಲಿನ ದೌರ್ಜನ್ಯಗಳ ಕಾರಣದಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಹಾಗೂ ಈ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಸಾಂಕ್ರಾಮಿಕ ವೈರಸ್ ಹರಡುವಿಕೆಯ ಸರಪಳಿಯನ್ನು ಮುರಿಯಬಹುದು.
1996 ರಲ್ಲಿ ಕಾಣಿಸಿಕೊಂಡ ಅತಿ ಗಂಭೀರ ಕಾಯಿಲೆ ಇನ್ಫ್ಲೂಯೆಂಜಾ (ಎಚ್‌ಪಿಎಐ) ಅಥವಾ ಪಕ್ಷಿ ಜ್ವರ, 1998 ರಲ್ಲಿ ಕಾಣಿಸಿಕೊಂಡ ನಿಪಾ ವೈರಸ್ ಸೋಂಕು, 2003 ರಲ್ಲಿ ಕಾಣಿಸಿಕೊಂಡಿದ್ದ ತೀವ್ರ ಉಸಿರಾಟದ ಸಮಸ್ಯೆ ತಂದೊಡ್ಡುವ ಸಾರ್ಸ್ (ಎಸ್ಎಆರ್ಸ್) ಮತ್ತು 2016 ರಲ್ಲಿ ಕಾಣಿಸಿಕೊಂಡ ಹಂದಿ ಜ್ವರ (ಎಸ್‌ಎಡಿಎಸ್) ಇವೆಲ್ಲವೂ ಚೀನಾದ ಗುವಾಂಗ್‌ಡಾಂಗ್‌ನಿಂದಲೇ ಹೊರಹೊಮ್ಮಿದ ಸಾಂಕ್ರಾಮಿಕ ರೋಗಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಿಶೇಷವಾಗಿ ಆಫ್ರಿಕಾದಲ್ಲಿ ಇಬೋಲಾ, ಮರ್ಸ್, ವೆಸ್ಟ್ ನೈಲ್ ಜ್ವರ ಮತ್ತು ರಿಫ್ಟ್ ವ್ಯಾಲಿ ಜ್ವರ ಇವೆಲ್ಲ ಸಾಮಾನ್ಯವಾಗಿವೆ ಮತ್ತು ಈ ಎಲ್ಲ ರೋಗಗಳು ಪ್ರಾಣಿ ಮೂಲಗಳಿಂದ ಮಾನವರಿಗೆ ಹರಡುತ್ತವೆ ಎಂದು ತಿಳಿದು ಬಂದಿದೆ.
ಯುಎನ್‌ಇಪಿ ಕಾರ್ಯನಿರ್ವಾಹಕ ನಿರ್ದೇಶಕ ಇಂಗರ್ ಆಂಡರ್ಸನ್, "ಕೋವಿಡ್-19 ನಂತರ ರಾಷ್ಟ್ರಗಳು ಮತ್ತೆ ಮೊದಲಿನಂತೆ ಪುಟಿದೇಳಲು ಪ್ರಯತ್ನಿಸುತ್ತಿರುವುದರಿಂದ, ಈ ಪ್ರಾಣಿಜನ್ಯ ವೈರಸ್ಗಳ ಹರಡುವಿಕೆ, ಅವುಗಳಿಂದ ಮಾನವನ ಆರೋಗ್ಯಕ್ಕೆ ಉಂಟಾಗಬಹುದಾದ ಅಪಾಯ ಮತ್ತು ಈ ವೈರಸ್ಗಳು ವಿನಾಶಕಾರಿಯಾಗಿ ಹರಡದಂತೆ ಹೇಗೆ ತಡೆಗಟ್ಟುವುದು ಎಂಬುದನ್ನು ಈಗಲೇ ಅರಿತುಕೊಳ್ಳಬೇಕಿದೆ." ಎಂದು ಹೇಳಿದ್ದಾರೆ.
"ಕೋವಿಡ್ -19 ಅತ್ಯಂತ ಗಂಭೀರ ಪ್ರಾಣಿಜನ್ಯ ಕಾಯಿಲೆಗಳಲ್ಲಿ ಒಂದಾಗಿದ್ದರೂ, ಇದೇ ಮೊದಲನೆಯದಲ್ಲ. ಎಬೋಲಾ, ಸಾರ್ಸ್, ಮರ್ಸ್, ಎಚ್ಐವಿ, ಲೈಮ್ ಡಿಸೀಸ್, ರಿಫ್ಟ್ ವ್ಯಾಲಿ ಜ್ವರ ಮತ್ತು ಲಾಸ್ಸಾ ಜ್ವರ ಮುಂತಾದ ಪ್ರಾಣಿಜನ್ಯ ಕಾಯಿಲೆಗಳು ಈ ಮುನ್ನ ಜಗತ್ತನ್ನು ಕಾಡಿವೆ. ಕಳೆದ ಶತಮಾನದಲ್ಲಿ ಕನಿಷ್ಠ ಆರು ಬಗೆಯ ಕೊರೊನಾ ವೈರಸ್ ಮಾದರಿಗಳನ್ನು ನಾವು ನೋಡಿದ್ದೇವೆ." ಎಂದು ಆಂಡರ್ಸನ್ ತಿಳಿಸಿದ್ದಾರೆ.
ಹೀಗಾಗಿ ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯವನ್ನು ಸಂಯೋಜಿಸುವುದು ಅತಿ ಅಗತ್ಯವಾಗಿದೆ. 'ಒನ್ ಹೆಲ್ಥ್' ಆರೋಗ್ಯ ವಿಧಾನದ ಮೂಲಕ ಮಾನವರ ಆರೋಗ್ಯ, ಪಶು ಆರೋಗ್ಯ ಮತ್ತು ಪರಿಸರದ ಆರೋಗ್ಯಗಳನ್ನು ಕಾಪಾಡಿ, ಕೋವಿಡ್ನಂಥ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಬಹುದು. ಆದ್ದರಿಂದ 'ಒನ್ ಹೆಲ್ಥ್' ವಿಧಾನವನ್ನು ವಿಶ್ವದ ರಾಷ್ಟ್ರಗಳು ಅಳವಡಿಸಿಕೊಳ್ಳಬೇಕೆಂದು ಯುಎನ್‌ಇಪಿ ಮತ್ತು ಐಎಲ್‌ಆರ್‌ಐ ಸಂಘಟನೆಗಳು ಒತ್ತಾಯಿಸುತ್ತಿವೆ.
ಮತ್ತಷ್ಟು ತೀವ್ರತರವಾದ ಪ್ರಾಣಿಜನ್ಯ ವೈರಸ್ಗಳು ಹರಡಲು ಜಗತ್ತಿನ ವಾತಾವರಣ ಅನುಕೂಲಕರವಾಗಿದೆ. ಹೀಗಾಗಿ ಹೊಸ ಕಾಯಿಲೆಗಳು ಸಹ ಕಾಣಿಸಿಕೊಳ್ಳಬಹುದು ಐಎಲ್‌ಆರ್‌ಐ ಡೈರೆಕ್ಟರ್ ಜನರಲ್ ಜಿಮ್ಮಿ ಸ್ಮಿತ್ ಹೇಳಿದರು.