ನವದೆಹಲಿ: ರಾಮ ಮಂದಿರ ಭೂಮಿ ಪೂಜೆ ಸಂದರ್ಭದಲ್ಲಿ 130 ಕೋಟಿ ಭಾರತೀಯರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.ಆದರೆ, ಭಾರತದ ಜನಸಂಖ್ಯೆ 138 ಕೋಟಿಗಿಂತ ಹೆಚ್ಚಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿಯ ನಂತರ 8 ಕೋಟಿ ಜನರನ್ನು ಕೈಬಿಟ್ಟಿರುವುದು ಅನೇಕರಿಗೆ ಆತಂಕ ತಂದಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೆಳಿದ್ದಾರೆ.
ಈ ಲೋಪ ಅಜಾಗರೂಕತೆಯಾಗಿದ್ದರೆ ಒಂದು ತಿದ್ದುಪಡಿ ಧೈರ್ಯ ತುಂಬುತ್ತದೆ ಎಂದು ತರೂರ್ ಹೇಳಿದ್ದಾರೆ.
ರಾಮ ಮಂದಿರ ಭೂಮಿ ಪೂಜೆ ವೇಳೆ ಮಾತನಾಡಿದಾಗ 130 ಕೋಟಿ ಭಾರತೀಯರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಆದರೆ, 2020ರ ಮಧ್ಯದಲ್ಲಿ ಭಾರತದ ಜನಸಂಖ್ಯೆ 138,00,04,385 ಎಂದು ಅಂದಾಜಿಸಲಾಗಿದೆ ಅಂತ ವಿಶ್ವಸಂಸ್ಥೆ ಅಂಕಿ- ಅಂಶಗಳು ತಿಳಿಸಿವೆ ಎಂದು ತರೂರ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
"ಸಿಎಎ, ಎನ್‌ಆರ್‌ಸಿ ನಂತರ 8 ಕೋಟಿ ಜನರನ್ನು ಕೈಬಿಟ್ಟಿರುವುದು ಅನೇಕರಿಗೆ ಆತಂಕವನ್ನುಂಟುಮಾಡಿದೆ. ಅಜಾಗರೂಕವಾಗಿದ್ದರೆ, ತಿದ್ದುಪಡಿ ಧೈರ್ಯ ತುಂಬುತ್ತದೆ" ಎಂದು ಅವರು ಹೇಳಿದರು.
ಅಯೋಧ್ಯೆಯ ರಾಮ ದೇವಾಲಯದ ಅಡಿಪಾಯ ಹಾಕಿದ ಸಂದರ್ಭದಲ್ಲಿ ಭಾಷಣ ಮಾಡಿದ ಮೋದಿ, ರಾಮ ದೇವಾಲಯದ ನಿರ್ಮಾಣಕ್ಕಾಗಿ ಹಲವಾರು ತಲೆಮಾರುಗಳು, ಹಲವಾರು ಶತಮಾನಗಳಿಂದ ನಿಸ್ವಾರ್ಥ ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದರು. ನಾನು, ದೇಶದ 130 ಕೋಟಿ ಜನರ ಪರವಾಗಿ, ಅವರ ತ್ಯಾಗಕ್ಕಾಗಿ ನಮಸ್ಕರಿಸುತ್ತೇನೆ, ಅವರ ತ್ಯಾಗ ರಾಮ ಮಂದಿರದ ಅಡಿಪಾಯಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು.