ನೆಲ್ಲೂರು (ಆಂಧ್ರಪ್ರದೇಶ): ಮಾಸ್ಕ್ ಧರಿಸಿಕೊಳ್ಳಿ ಎಂದಿದ್ದಕ್ಕೆ ರೊಚ್ಚಿಗೆದ್ದ ವ್ಯಕ್ತಿಯೊಬ್ಬ ಮಹಿಳಾ ಸಿಬ್ಬಂದಿಗೆ ಮನಬಂದಂತೆ ಥಳಿಸಿರುವ ಘಟನೆ ಇಲ್ಲಿನ ಪ್ರವಾಸೋದ್ಯಮ ಕಚೇರಿಯಲ್ಲಿ ನಡೆದಿದೆ.
'ಮಾಸ್ಕ್ ಹಾಕ್ಕೊಳಿ ಸರ್' ಅಂದಿದ್ದೇ ತಪ್ಪಾಯ್ತು! ಮಹಿಳಾ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ - ಆಂದ್ರ ಪ್ರದೇಶ ಸುದ್ದಿ
ಇವನೇನು ಮನುಷ್ಯನೋ ಅಲ್ಲ ಪ್ರಾಣಿಯೋ ಅಂತಾ ಈ ವಿಡಿಯೋ ನೋಡಿದ ಮೇಲೆ ನೀವು ಹೇಳದೆ ಇರಲ್ಲ. ಆತನ ಆರೋಗ್ಯದ ಹಿತದೃಷ್ಟಿಯಿಂದ 'ಮಾಸ್ಕ್ ಹಾಕಿಕೊಳ್ಳಿ ಸರ್' ಎಂದಿದ್ದಕ್ಕೆ ಈ ಪುರುಷ, ಮಹಿಳಾ ಸಿಬ್ಬಂದಿ ಮೇಲೆ ತನ್ನ ಪೌರುಷ ತೋರಿಸಿದ್ದಾನೆ.
ನೆಲ್ಲೂರಿನ ಪ್ರವಾಸೋದ್ಯಮ ಹೋಟೆಲ್ ಕಚೇರಿಯಲ್ಲಿ ಉಪ ವ್ಯವಸ್ಥಾಪಕನಾಗಿರುವ ಭಾಸ್ಕರ್, ಗುತ್ತಿಗೆ ಆಧಾರದಲ್ಲಿ ಉದ್ಯೋಗಿಯಾಗಿರುವ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಎಲ್ಲೆಡೆ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಇದರಿಂದ ಮುಂಜಾಗ್ರತಾ ಕ್ರಮವಾಗಿ ಆಕೆ ಮಾಸ್ಕ್ ಹಾಕಿಕೊಳ್ಳುವಂತೆ ಆತನನ್ನು ಕೇಳಿಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಆತ ಮಹಿಳೆಯೆಂಬುದನ್ನೂ ನೋಡದೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಆಕೆ ಕುಳಿತಿದ್ದ ಕುರ್ಚಿಯಿಂದ ಎಳೆದು ಹೊರಹಾಕಿ ಸಿಕ್ಕ ಸಿಕ್ಕ ವಸ್ತುಗಳು ಹಾಗೂ ಕಬ್ಬಿಣದ ರಾಡ್‌ನಿಂದ ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ ತನ್ನ ಸಹೋದ್ಯೋಗಿಗಳ ಮೇಲೂ ಕೋಪ ತೋರಿಸಿಕೊಂಡಿದ್ದಾನೆ.
ಈ ಘಟನೆ ಎರಡು ದಿನಗಳ ಹಿಂದೆಯೇ ನಡೆದಿದ್ದು, ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿರುವ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈಗಾಗಲೇ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಮಹಿಳೆ ಎನ್ನದೆ ಮನಬಂದಂತೆ ಥಳಿಸಿದ ಭಂಡ ಪುರುಷ ಭಾಸ್ಕರ್ಗಾಗಿ ಬಲೆ ಬೀಸಿದ್ದಾರೆ.