ಕಟಕ್: ಮೂರು ವರ್ಷಗಳ ಹಿಂದೆ ಭಾರತದ ಮೊದಲ ಕ್ರಾನಿಯೊಪಾಗಸ್ ಯಶಸ್ವಿ ಸರ್ಜರಿಯಲ್ಲಿ ಬೇರ್ಪಟ್ಟಿದ್ದ ಒಡಿಶಾದ ಸಯಾಮಿ ಅವಳಿ ಮಕ್ಕಳಲ್ಲಿ ಒಂದು ಮಗು ನಿನ್ನೆ ಸಂಜೆ ಸರ್ಕಾರಿ ಒಡೆತನದ ಶ್ರೀರಾಮ ಚಂದ್ರ ಭಂಜ (ಎಸ್‌ಸಿಬಿ) ವೈದ್ಯಕೀಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.
ಆಸ್ಪತ್ರೆಯ ತುರ್ತು ನಿಗಾ ಅಧಿಕಾರಿ ಡಾ. ಭುವನಾನಂದ ಮಹಾರಾಣ ಈ ಕುರಿತು ಮಾಹಿತಿ ನೀಡಿದ್ದು, ಮಗು ಕಾಲಿಯಾವು ಟ್ರೌಮಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಮೃತಪಟ್ಟಿರುವುದಾಗಿ ತಿಳಿಸಿದರು.
2017 ರ ಅಕ್ಟೋಬರ್ನಲ್ಲಿ ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಲ್ಲಿ ಅವಳಿ ಮಕ್ಕಳನ್ನು ಬೇರ್ಪಡಿಸಲಾಗಿತ್ತು. 2 ವರ್ಷಗಳ ಅವಲೋಕನ ಮತ್ತು ಕೆಲ ಚಿಕಿತ್ಸೆಯ ನಂತರ ಮಕ್ಕಳನ್ನು 2019ರ ಸೆಪ್ಟೆಂಬರ್‌ನಲ್ಲಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಬೇರ್ಪಟ್ಟ ಆ ಅವಳಿಗಳಲ್ಲಿ ಒಬ್ಬರಾದ ಕಾಲಿಯಾ ಬುಧವಾರ ಸಂಜೆ ಸೆಪ್ಟಿಸೆಮಿಯಾ ಸಮಸ್ಯೆ ಮತ್ತು ಆಘಾತದಿಂದ ಸಾವನ್ನಪ್ಪಿದೆಯೆಂದು ಮಾಹಿತಿ ನೀಡಿದರು.