ಭುವನೇಶ್ವರ:ಆಗ್ನೇಯ ಬಂಗಾಳಕೊಲ್ಲಿಯಲ್ಲಿ 'ಆಂಫಾನ್' ಚಂಡಮಾರುತ ಮುಂದಿನ 6 ಗಂಟೆಗಳಲ್ಲಿ ತೀವ್ರವಾಗಲಿದ್ದು, ನಂತರದ 12 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತವು ಆರಂಭದಲ್ಲಿ ಮೇ 17 ರವರೆಗೆ ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಮೇ 18-20ರ ಅವಧಿಯಲ್ಲಿ ಪಶ್ಚಿಮ ಬಂಗಾಳ ಮತ್ತು ಪಕ್ಕದ ಉತ್ತರ ಒಡಿಶಾ ತೀರಗಳ ಕಡೆಗೆ ತಿರುಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುನ್ಸೂಚನೆಯ ಪ್ರಕಾರ ಇಂದು ಸಂಜೆ ವೇಳೆಗೆ ಆಗ್ನೇಯ ಮತ್ತು ನೈಋತ್ಯ ಬಂಗಾಳಕೊಲ್ಲಿಯಲ್ಲಿ ಗಾಳಿಯ ವೇಗವು 65 ರಿಂದ 75 ಕಿ.ಮೀ ಇದ್ದು 85 ಕಿ.ಮೀ.ಗೆ ತಲುಪುತ್ತದೆ. ಪೂರ್ವ ಮಧ್ಯ ಬಂಗಾಳ ಕೊಲ್ಲಿಯಲ್ಲಿ 90 ಕಿ.ಮೀ. ಇಂದ 110 ಕಿಲೋ ಮೀಟರ್ಗೆ ವೇಗ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
ಮೇ 18 ರ ಬೆಳಗ್ಗೆ ಮಧ್ಯ ಬಂಗಾಳಕೊಲ್ಲಿಯ ದಕ್ಷಿಣ ಭಾಗಗಳಲ್ಲಿ 125-135 ಕಿ.ಮೀ ವೇಗದಿಂದ 150 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಮಧ್ಯ ಬಂಗಾಳಕೊಲ್ಲಿಯ ಉತ್ತರ ಭಾಗಗಳಲ್ಲಿ 190 ಕಿ.ಮೀ ವೇಗದವರೆಗೂ ಗಾಳಿ ಬೀಸಲಿದೆ ಎಂದು ಹೇಳಲಾಗಿದೆ. ಆಂಧ್ರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸಮುದ್ರ ತೀರಕ್ಕೆ ಮೀನುಗಾರರು ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈಗಾಗಲೆ ಚಂಡಮಾರುತವನ್ನು ಎದುರಿಸಲು ಸಿದ್ದವಾಗಿರುವ ಒಡಿಶಾ ಸರ್ಕಾರ, ವಿಪತ್ತು ಕ್ಷಿಪ್ರ ಕ್ರಿಯಾ ಪಡೆ (ಒಡಿಆರ್ಎಎಫ್) 20 ತಂಡಗಳು, ಎನ್ಡಿಆರ್ಎಫ್ನ 17 ತಂಡಗಳು ಮತ್ತು ರಾಜ್ಯ ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣೆಯ 335 ಘಟಕಗಳನ್ನು ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿರುವಂತೆ ನಿರ್ದೇಶಿಸಿದೆ.