ನವದೆಹಲಿ: ಈವರೆಗೆ ದೇಶದಲ್ಲಿ 324 ಮಂದಿ ಮಾರಕ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ದೇಶದಲ್ಲಿ ಕೊರೊನಾ ಬಾಧಿತರ ಸಂಖ್ಯೆ 324ಕ್ಕೆ ಏರಿಕೆ: ಮಹಾರಾಷ್ಟ್ರದಲ್ಲಿ ಸೋಂಕಿತರು ಹೆಚ್ಚು
ಭಾರತದಲ್ಲಿ ಈವರೆಗೆ ಒಟ್ಟು 324 ಕೊರೊನಾ ವೈರಸ್ ಸೋಂಕಿತರ ಪ್ರಕರಣಗಳು ಪತ್ತೆಯಾಗಿದ್ದು 4 ಸಾವುಗಳು ವರದಿಯಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ, ಕೊರೊನಾ ವೈರಸ್ಗೆ ದೇಶದಲ್ಲಿ 4 ಮಂದಿ ಬಲಿಯಾಗಿದ್ದಾರೆ. 22 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 83 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆಯ ಪ್ರಮಾಣ ಹೆಚ್ಚುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದಲ್ಲಿ ಒಟ್ಟು 63 ಮಂದಿ, ಕೇರಳದಲ್ಲಿ 40 ಮಂದಿ, ದೆಹಲಿಯಲ್ಲಿ 26 ಮಂದಿ, ಉತ್ತರ ಪ್ರದೇಶದಲ್ಲಿ 24 ಮಂದಿ ಹಾಗೂ ತೆಲಂಗಾಣದಲ್ಲಿ 21 ಮಂದಿ ಕೊರೊನಾ ವೈರಸ್ ಸೋಂಕಿತರಿರುವುದು ದೃಢಪಟ್ಟಿದೆ. ಇವು ದೇಶದಲ್ಲೇ ಟಾಪ್ 5 ಕೊರೊನಾ ವೈರಸ್ ಸೊಂಕಿತ ರಾಜ್ಯಗಳೆನಿಸಿವೆ.