ನವದೆಹಲಿ:ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜುಲೈ 5ರಂದು ಸುಮಾರು ಎರಡು ಗಂಟೆಗಳವರೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಲಡಾಖ್‌ನಲ್ಲಿನ ಪಶ್ಚಿಮ ವಲಯದ ಬಗ್ಗೆ ‘ಮುಕ್ತ ಮತ್ತು ಆಳವಾದ ಅಭಿಪ್ರಾಯಗಳನ್ನು’ ಇಬ್ಬರೂ ಮುಖಂಡರು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಭಯ ದೇಶಗಳ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎರಡೂ ದೇಶಗಳು ಕಾರ್ಯೋನ್ಮುಖವಾಗಬೇಕೆಂದು, ಮುಂದಿನ ದಿನಗಳಲ್ಲಿ ಇಂತಹ ಸಂಘರ್ಷ ತಪ್ಪಿಸಲು ಮುಂದಾಗುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗಡಿ ವಿವಾದವನ್ನು ಪರಿಹರಿಸುವ ನಿಟ್ಟಿಲ್ಲಿ ದೋವಲ್ ಮತ್ತು ವಾಂಗ್ ಯಿ ಇಬ್ಬರನ್ನೂ ವಿಶೇಷ ಪ್ರತಿನಿಧಿಯನ್ನಾಗಿ ನೇಮಕ ಮಾಡಿರುವುದರಿಂದ ಭಾನುವಾರದ ಸಂವಾದ ಮಹತ್ವ ಪಡೆದಿತ್ತು. ಇಬ್ಬರು ವಿಶೇಷ ಪ್ರತಿನಿಧಿಗಳ ಮಧ್ಯೆ ಸಂವಾದವನ್ನು ಪುನಃ ಸಕ್ರಿಯಗೊಳಿಸುವ ಮೂಲಕ ಉನ್ನತ ಮಟ್ಟದ ರಾಜತಾಂತ್ರಿಕತೆಯಲ್ಲಿ ತೊಡಗಿಸಿಕೊಳ್ಳಲು ಭಾರತ ಸೂಚಿಸಿತ್ತು.
ಮೂಲಗಳ ಪ್ರಕಾರ, ಭಿನ್ನಾಭಿಪ್ರಾಯಗಳನ್ನು ವಿವಾದಗಳನ್ನಾಗಿಸಲು ಅವಕಾಶ ಕೊಡಬಾರದು ಎಂದು ಇಬ್ಬರೂ ನಾಯಕರು ಒಪ್ಪಿದ್ದಾರೆ ಮತ್ತು ಇಂಡೋ-ಚೀನಾ ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಲು ಎರಡೂ ದೇಶದ ರಾಜಕೀಯ ನಾಯಕರು ಹೊಂದಿರುವ ಬದ್ಧತೆಯನ್ನು ಈ ಮಾತುಕತೆಯಲ್ಲಿ ಪುನರುಚ್ಚರಿಸಲಾಗಿದೆ ಎಂದು ಹೇಳಲಾಗಿದೆ.
ಎಲ್‌ಎಸಿಯಿಂದ ಶೀಘ್ರದಲ್ಲೇ ಸೇನೆ ಹಿಂಪಡೆಯುವುದು ಮತ್ತು ಈ ಭಾಗದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ ಎಂದು ಇಬ್ಬರೂ ಒಪ್ಪಿದ್ದಾರೆ. ಪ್ರಸ್ತುತ ಎಲ್‌ಎಸಿಯಲ್ಲಿ ತ್ವರಿತವಾಗಿ ಸೇನೆ ಹಿಂಪಡೆಯುವ ಪ್ರಕ್ರಿಯೆಯನ್ನು ಎರಡೂ ದೇಶಗಳು ಪೂರ್ಣಗೊಳಿಸಬೇಕು ಎಂದು ಮಾತುಕತೆಯಾಗಿದೆ. ಭಾರತೀಯ ಅಧಿಕಾರಿಗಳ ಪ್ರಕಾರ, ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ “ಹಂತ ಹಂತವಾಗಿ ಸೇನೆ ಹಿಂಪಡೆಯುವಿಕೆ” ಪ್ರಕ್ರಿಯೆ ನಡೆಸಲು ಇಬ್ಬರೂ ವಿಶೇಷ ಪ್ರತಿನಿಧಿಗಳು ಒಪ್ಪಿದ್ದಾರೆ. ಅಲ್ಲದೆ ಹಲವು ಹಂತದಲ್ಲಿ ಸೇನಾಧಿಕಾರಿಗಳ ಮಾತುಕತೆಗೂ ಅವರು ಒಪ್ಪಿದ್ದಾರೆ ಎಂದು ಹೇಳಲಾಗಿದೆ.