ನವದೆಹಲಿ: ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ನಿಯಂತ್ರಿಸಲು ಸ್ವತಃ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮುಂದಾಗಿದ್ದಾರೆ. ಮಂಗಳವಾರ ತಡರಾತ್ರಿ ಅವರು ರಾತ್ರಿ ಈಶಾನ್ಯ ದೆಹಲಿಯ ಸೀಲಾಂಪುರಕ್ಕೆ ತಲುಪಿದ್ದು, ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯುತ್ತಿದ್ದಾರೆ.
ದಿಲ್ಲಿ ಹಿಂಸಾಚಾರ: ಸೀಲಾಂಪುರಕ್ಕೆ ಅಜಿತ್ ದೋವಲ್, ಹಿರಿಯ ಅಧಿಕಾರಿಗಳೊಂದಿಗೆ ಸಭೆ
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ನಿಯಂತ್ರಿಸಲು ಸ್ವತಃ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮುಂದಾಗಿದ್ದಾರೆ.
ಮಾಹಿತಿಯ ಪ್ರಕಾರ, ಕಳೆದ ಎರಡು ದಿನಗಳಲ್ಲಿ ರಾಜಧಾನಿಯಲ್ಲಿ ನಡೆದ ಹಿಂಸಾಚಾರವು ಕೇಂದ್ರ ಸರ್ಕಾರವನ್ನೂ ಚಿಂತೆಗೀಡುಮಾಡಿದೆ. ಅದರಲ್ಲೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯಲ್ಲಿರುವಾಗಲೇ ಇಂತಹದೊಂದು ಹಿಂಸಾಚಾರ ನಡೆದಿದೆ. ಹೀಗಾಗಿ ಘಟನೆ ಹಿಂದೆ ಯಾರದ್ದಾದರೂ ಪಿತೂರಿ ಇದೆಯೇ ಎಂಬುದರ ಬಗ್ಗೆಯೂ ದೋವಲ್ ಕಲೆಹಾಕುತ್ತಿದ್ದು, ಹಿಂಸಾಚಾರ ನಿಯಂತ್ರಿಸುವ ಬಗ್ಗೆಯೂ ತಂತ್ರ ರೂಪಿಸುವ ಸಾಧ್ಯತೆಯಿದೆ.
ಅಜಿತ್ ದೋವಲ್ ಅವರು ಸೀಲಾಂಪುರದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದು, ಹಿಂಸಾಚಾರ ಹೇಗೆ ಸಂಭವಿಸಿದೆ? ಎಷ್ಟು ಜನರು ಗಾಯಗೊಂಡಿದ್ದಾರೆ ಮತ್ತು ಹಿಂಸಾಚಾರ ತಡೆಗೆ ಪೊಲೀಸರು ಯಾವೆಲ್ಲ ಕ್ರಮ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆಯೂ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.