ಮುಂಬೈ (ಮಹಾರಾಷ್ಟ್ರ) :ಮುಂಬರುವ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗದಿರುವುದಕ್ಕೆ ಯಾವುದೇ ಬೇಸರವಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ನಾಯಕಿ ಪಂಕಜಾ ಮುಂಡೆ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಂಬಲಿಗರು ಯಾವುದೇ ಕಾರಣಕ್ಕೂ ನಿರಾಸೆಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಜೊತೆಗೆ ನಮಗೆ ನಮ್ಮ ತಂದೆಯವರಾದ ಗೋಪಿನಾಥ್ ಮುಂಡೆ ಅವರ ಆಶೀರ್ವಾದವಿದೆ ಎಂದಿದ್ದಾರೆ.
ಮಾಜಿ ಸಚಿವರಾದ ಪಂಕಜಾ ಮುಂಡೆ ಹಿಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸಂಬಂಧಿ ಹಾಗೂ ಎನ್ಸಿಪಿ ನಾಯಕ ಧನಂಜಯ್ ಮುಂಡೆ ವಿರುದ್ಧ ಸೋಲನ್ನಪ್ಪಿದ್ದರು. ಮೇ 21ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಹೇಳುವುದಕ್ಕೆ ಏನೂ ಉಳಿದಿಲ್ಲ. ನಮ್ಮ ಪಕ್ಷದಿಂದ ಸ್ಪರ್ಧಿಸುತ್ತಿರುವ ನಾಲ್ವರೂ ಅಭ್ಯರ್ಥಿಗಳಿಗೆ ಶುಭಾಶಯಗಳು ಎಂದು ಪಂಕಜಾ ಮುಂಡೆ ತಿಳಿಸಿದ್ದಾರೆ. ನಾಲ್ವರು ಅಭ್ಯರ್ಥಿಗಳಾದ ರಂಜಿತ್ ಸಿನ್ಹ್ ಮೋಹಿತೆ, ಗೋಪಿಚಂದ್ ಪಡಾಲ್ಕರ್, ಪ್ರವೀಣ್ ಡಾಟ್ಕೆ, ಅಜಿತ್ ಗೋಪ್ಚಡೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಹಿರಿಯ ಬಿಜೆಪಿ ನಾಯಕ ಏಕ್ನಾಥ್ ಖಡ್ಸೆಯನ್ನೂ ಪರಿಷತ್ ಚುನಾವಣೆಯಲ್ಲಿ ಕಡೆಗಣಿಸಿದೆ. ಅವರೂ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.