ನವದೆಹಲಿ:ದೇಶಕ್ಕೆ ಕೇವಲ ಒಂದು ಮಾರುಕಟ್ಟೆ ಸಾಲದು, ಪ್ರಸ್ತುತ ಸಾವಿರಾರು ಮಾರುಕಟ್ಟೆಗಳ ಅವಶ್ಯಕತೆ ಇದೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಭಾರಿ ಗದ್ದಲದ ನಡುವೆ ಕೃಷಿ ಮಸೂದೆಗಳು ಅಂಗೀಕಾರವಾದ ಬೆನ್ನಲ್ಲೇ ಚಿದಂಬರಂ ಕೇಂದ್ರ ಸರ್ಕಾರ ಇತ್ತೀಚೆಗೆ ನೀಡಿದ್ದ ''ಒಂದು ರಾಷ್ಟ್ರ, ಒಂದು ಮಾರುಕಟ್ಟೆ, ರೈತರಿಗೆ ಸ್ವಾತಂತ್ರ್ಯ ನೀಡುತ್ತದೆ'' ಎಂಬ ಜಾಹೀರಾತಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಕೃಷಿ ಮಸೂದೆಗಳನ್ನು ಸಮರ್ಥಿಸುವ ಜಾಹೀರಾತುಗಳನ್ನು ಬಿಡುಗಡೆ ಮಾಡಿದೆ. ಜಾಹೀರಾತಿನ ಸಾಲುಗಳಂತೆ ದೇಶಕ್ಕೆ ಒಂದು ಮಾರುಕಟ್ಟೆ ಬೇಕಿಲ್ಲ. ಸಾವಿರಾರು ಮಾರುಕಟ್ಟೆಗಳ ಅವಶ್ಯಕತೆ ಇದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಶೇಕಡಾ 85ರಷ್ಟು ರೈತರು ಸಣ್ಣ ರೈತರಾಗಿದ್ದು, ಅವರು ಕೆಲವು ಚೀಲ ಭತ್ತ ಅಥವಾ ಗೋಧಿಯನ್ನು ಮಾರಾಟ ಮಾಡಬೇಕಾದರೆ, ಅವರಿಗೆ ದೇಶಾದ್ಯಂತ ಅನೇಕ ಸಾವಿರ ಮಾರುಕಟ್ಟೆಗಳು ಬೇಕಾಗುತ್ತವೆ. ಕೇವಲ ಒಂದು ಮಾರುಕಟ್ಟೆಯಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಮಾರುಕಟ್ಟೆಗಳ ರಚನೆಗೆ ಮಸೂದೆಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತವೆ ಎಂದು ಪ್ರಶ್ನಿಸಿರುವ ಚಿದಂಬರಂ ಸಾವಿರಾರು ಮಾರುಕಟ್ಟೆಗಳು ರೈತರಿಗೆ ಸ್ವಾತಂತ್ರ್ಯವನ್ನು ನೀಡುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.