ಹೈದರಾಬಾದ್ (ತೆಲಂಗಾಣ):ಕೇಂದ್ರ ಸರ್ಕಾರಕ್ಕೆ ರಾಜ್ಯಗಳಿಂದ ತೆರಿಗೆ ರೂಪದಲ್ಲಿ ಬಹುಪಾಲು ಹಣ ಸಲ್ಲಿಕೆಯಾಗುತ್ತದೆ. ಆದರೆ ಕೇಂದ್ರ ಮಾತ್ರ ರಾಜ್ಯಗಳಿಗೆ ಅನುದಾನ ನೀಡುವ ವಿಚಾರದಲ್ಲಿ ತಾರತಮ್ಯ ಮಾಡುತ್ತದೆ ಎಂಬ ಆರೋಪಗಳು ಕೇಳಿಬರುತ್ತಲೇ ಇರುತ್ತವೆ.
ವಿಶೇಷವಾಗಿ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷವಿದ್ದರೆ, ಇಲ್ಲವೇ ಕೇಂದ್ರದಲ್ಲೊಂದು, ರಾಜ್ಯ ಮತ್ತೊಂದು ಪಕ್ಷ ಅಧಿಕಾರದಲ್ಲಿದ್ದರೆ ಮುಗಿದೇ ಹೋಯ್ತು. ತಮ್ಮ ಪಾಲು ನೀಡಿಲ್ಲ ಎಂದು ಸರ್ಕಾರಗಳು ದೆಹಲಿಯ ಸಂಸತ್ ಭವನದಲ್ಲಿ ಆಡಳಿತ ನಡೆಸುವ ಪಕ್ಷದ ವಿರುದ್ಧ ಆರೋಪ ಮಾಡುತ್ತಲೇ ಬಂದಿವೆ. ಇದಕ್ಕೆ ಪರಿಹಾರ ಎಂಬಂತೆ ಹಾಗಾಗೆ ಕೆಲ ಪ್ರಾದೇಶಿಕ ಪಕ್ಷಗಳು ಹಲವಾರು ನಿರ್ಧಾರಗಳ ಬಗ್ಗೆ ಚರ್ಚೆ ನಡೆಸುತ್ತಲೇ ಇರುತ್ತವೆ.
ತೆಲಂಗಾಣದ ಸಿಎಂ ಕೆಸಿಆರ್ ರಾಷ್ಟ್ರೀಯ ಪಕ್ಷವನ್ನು ಕಟ್ಟಲು ಮುಂದಾಗಿದ್ದಾರೆಯೇ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಸಿಆರ್, ಸದ್ಯಕ್ಕೆ ರಾಷ್ಟ್ರೀಯ ಪಕ್ಷ ಕಟ್ಟುವ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿನ್ನೆ ನಡೆದ ಟಿಆರ್‌ಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿರುವ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ಈ ಹಿಂದೆ ಆಡಳಿತ ನಡೆಸಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಪಕ್ಷಗಳು ದೇಶವನ್ನು ನಾಶ ಮಾಡಿವೆ. ಇವರಿಗೆ ಪರ್ಯಾಯವಾದ ಮಾರ್ಗವನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
2018ರಲ್ಲೇ ಕೆಸಿಆರ್, ಬಿಜೆಪಿ ಹಾಗೂ ಕಾಂಗ್ರೆಸ್‌ನ ಹೊರತುಪಡಿಸಿ ತೃತೀಯ ರಂಗವನ್ನು ರಚಿಸಬೇಕೆಂಬ ಅಭಿಲಾಶೆಯನ್ನು ವ್ಯಕ್ತಪಡಿಸಿದ್ದರು. ಈ ಸಂಬಂಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಜನತಾ ದಳದ ವರಿಷ್ಠ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಅಖಿಲೇಶ್ ಯಾದವ್ ಹಾಗೂ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಅವರೊಂದಿಗೂ ಮಾತುಕತೆ ನಡೆಸಿದ್ದರು.