ಬೆಂಗಳೂರು:ಇಸ್ರೋ ವಿಜ್ಞಾನಿಗಳ ಕಣ್ಣು ತಪ್ಪಿಸಿ ಕೊನೆ ಗಳಿಗೆಯಲ್ಲಿ ಕೈಕೊಟ್ಟಿದ್ದ ವಿಕ್ರಂ ಲ್ಯಾಂಡರ್ ಪತ್ತೆ ಹಚ್ಚುವಲ್ಲಿ ಆರ್ಬಿಟರ್ ಯಶಸ್ವಿಯಾಗಿತ್ತು. ಇದೀಗ ವಿಕ್ರಂನನ್ನು ಪತ್ತೆ ಹಚ್ಚಿ ಇರುವಿಕೆಯನ್ನ ಖಚಿತ ಪಡಿಸಿಕೊಂಡಿದೆ ಇಸ್ರೋ. ಅಂದಹಾಗೆ ಸಾಫ್ಟ್ ಲ್ಯಾಂಡಿಂಗ್ ಬದಲು ವಿಕ್ರಂ ಹಾರ್ಡ್ ಲ್ಯಾಂಡಿಂಗ್ ಆಗಿದ್ದಾನೆ. ಕೇವಲ 2.1 ಕಿಮೀ ಹತ್ತಿರ ಬಂದು ಇಸ್ರೋ ಸಂಪರ್ಕದಿಂದ ಕಣ್ಮರೆ ಆಗಿದ್ದ ವಿಕ್ರಂ ಓರೆಯಾಗಿ ಶಶಿಯ ಅಂಗಳವನ್ನ ತಲುಪಿದೆ.
ಸಾಫ್ಟ್ ಲ್ಯಾಂಡಿಂಗ್ ಆಗಿ ವಿಕ್ರಮ ಮೆರೆಯುವ ವಿಜ್ಞಾನಿಗಳ ಆಸೆಯನ್ನ ತುಸು ನಿರಾಸೆಗೊಳಿಸಿದ್ದ ವಿಕ್ರಂ ಈಗ, ಶಶಿ ಅಂಗಳದಲ್ಲಿ ಓರೆಯಾಗಿ ಲ್ಯಾಂಡಿಂಗ್ ಆಗಿರುವುದು ಇಸ್ರೋ ವಿಜ್ಞಾನಿಗಳ ಆಸೆಯನ್ನ ಮತ್ತಷ್ಟು ಜೀವಂತವಾಗಿರಿಸಿದ್ದು, ವಿಕ್ರಂನ ಅಂತರಾಳದಲ್ಲಿರುವ ರೋವರ್ ಅನ್ನು ಕೆಳಗಿಳಿಸಿ ಕಾರ್ಯಾಚರಣೆ ಮಾಡಲು ಇನ್ನಿಲ್ಲದ ಶ್ರಮ ಹಾಕುವಂತೆ ಮಾಡಿದೆ.
ಈ ಸಂಬಂಧ ಸೋಮವಾರ ಹೇಳಿಕೆ ನೀಡಿರುವ ಇಸ್ರೋ ಅಧಿಕಾರಿಗಳು, ಯೋಜನೆ ಹಾಕಿಕೊಂಡಂತೆ ಅದೇ ಜಾಗದಲ್ಲಿ ವಿಕ್ರಂ ಹಾರ್ಡ್ ಲ್ಯಾಂಡಿಂಗ್ ಆಗಿದ್ದಾನೆ. ಆರ್ಬಿಟರ್ನ ಬೋರ್ಡ್ ಕ್ಯಾಮೆರಾ ಈ ಇಮೇಜ್ ಅನ್ನು ಇಸ್ರೋಗೆ ಕಳುಹಿಸಿದ್ದು, ವಿಕ್ರಂ ಒರೆಯಾಗಿ ಹಾರ್ಡ್ ಲ್ಯಾಂಡಿಂಗ್ ಆಗಿದ್ದು, ತುಂಡು ತುಂಡಾಗಿ ಬಿದ್ದಿಲ್ಲ. ಬದಲಿಗೆ ಓರೆಯಾಗಿ ನಿಗದಿತ ಸ್ಥಳದಲ್ಲಿ ಹಾರ್ಡ್ ಲ್ಯಾಂಡಿಂಗ್ ಆಗಿದೆ. ಇನ್ನು ರೋವರ್ ಪ್ರಗ್ಯಾನ್ ವಿಕ್ರಮನ ಅಂತರಾಳದಲ್ಲೇ ಇದ್ದಾನೆ ಎಂದು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಲ್ಯಾಂಡರ್ನಿಂದ ಸಂವಹನಕ್ಕೆ ತೀವ್ರ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ ತಂತ್ರಜ್ಞರು.