ಇಸ್ಲಾಮಾಬಾದ್: ಮರಣದಂಡನೆಗೆ ಗುರಿಯಾಗಿರುವ ಕುಲ್ಭೂಷಣ್ ಜಾಧವ್ ಅವರ ಪರವಾಗಿ ವಾದಿಸಲು ಭಾರತದ ವಕೀಲರಿಗೆ ಅವಕಾಶ ನೀಡುವುದು ಈ ದೇಶದ ನ್ಯಾಯಾಲಯದಲ್ಲಿ ಕಾನೂನುಬದ್ಧವಾಗಿ ಸಾಧ್ಯವಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಸೆಪ್ಟೆಂಬರ್ 3ರಂದು ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ನಡೆಯಲಿರುವ ಜಾಧವ್ ಅವರ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಸ್ಥಳೀಯ ಸಲಹೆಗಾರರನ್ನು ನೇಮಿಸಬೇಕೆಂಬ ಭಾರತದ ಬೇಡಿಕೆಯ ಬಗ್ಗೆ ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಜಾಹಿದ್ ಹಫೀಜ್ ಚೌಧರಿ ಅವರನ್ನು ಕೇಳಿದಾಗ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
ಜಾಧವ್ ಅವರ ಪರ ವಾದಿಸಲು ಭಾರತೀಯ ವಕೀಲರಿಗೆ ಅವಕಾಶ ನೀಡುವಂತೆ ಭಾರತದ ಹಲವೆಡೆಯಿಂದ ಹಲವು ಬೇಡಿಕೆಗಳು ಬಂದಿವೆ. ಆದರೆ ಪಾಕಿಸ್ತಾನದಲ್ಲಿ ಕಾನೂನು ಅಭ್ಯಾಸ ಮಾಡಲು ಪರವಾನಗಿ ಹೊಂದಿರುವ ವಕೀಲರು ಮಾತ್ರ ನ್ಯಾಯಾಲಯದಲ್ಲಿ ಜಾಧವ್ ಅವರ ಪರ ವಾದಿಸಲು ಸಾಧ್ಯ ಎಂಬುದನ್ನು ನಾವು ಪದೇ ಪದೆ ಹೇಳಿದ್ದೇವೆ. ಅಲ್ಲದೆ ಇದು ಇತರ ನ್ಯಾಯ ವ್ಯಾಪ್ತಿಯಲ್ಲಿ ಬರುವ ಕಾನೂನು ಅಭ್ಯಾಸದ ಅನುಸರವಾಗಿದೆ ಎಂದು ಅವರು ಹೇಳಿದರು.
ಭಾರತೀಯ ಸುಪ್ರೀಂಕೋರ್ಟ್ ತನ್ನ ಒಂದು ತೀರ್ಪಿನಲ್ಲಿ, ವಿದೇಶಿ ವಕೀಲರು ದೇಶದೊಳಗೆ ಕಾನೂನು ಅಭ್ಯಾಸ ಮಾಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ ಎಂದು ವಕ್ತಾರರು ಇದೇ ವೇಳೆ ತಿಳಿಸಿದರು.
50 ವರ್ಷದ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್ ಅವರಿಗೆ 2017ರ ಏಪ್ರಿಲ್‌ನಲ್ಲಿ "ಗೂಢಚರ್ಯೆ ಮತ್ತು ಭಯೋತ್ಪಾದನೆ" ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ವಾರಗಳ ನಂತರ ಭಾರತವು ಜಾಧವ್ಗೆ ಕಾನ್ಸುಲರ್ ಪ್ರವೇಶವನ್ನು ನಿರಾಕರಿಸಿದ್ದಕ್ಕಾಗಿ ಮತ್ತು ಮರಣದಂಡನೆಯನ್ನು ಪ್ರಶ್ನಿಸಿ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು (ಐಸಿಜೆ) ಸಂಪರ್ಕಿಸಿತ್ತು.