ಏಷ್ಯಾದ ಎರಡು ದೊಡ್ಡ ದೇಶಗಳಾದ ಭಾರತ ಮತ್ತು ಚೀನಾ ಮಧ್ಯೆ ಪೂರ್ವ ಲಡಾಖ್ನಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷ ಕೇವಲ ಭೂಮಿ ಕಬಳಿಕೆ ಅಥವಾ ಭೌಗೋಳಿಕ ರಾಜಕೀಯ ವ್ಯೂಹಾತ್ಮಕ ತಂತ್ರವಷ್ಟೇ ಅಲ್ಲ. ಪೂರ್ವ ಭಾಗವೂ ಸೇರಿದಂತೆ ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನೈಸರ್ಗಿಕ ಅನಿಲ ಮತ್ತು ತೈಲ ಸೇರಿದಂತೆ ಹೈಡ್ರೋ ಕಾರ್ಬನ್ ಸಂಪನ್ಮೂಲ ಇದೆ. ಇದರ ಜೊತೆಗೆ, ಜಿಯೋ ಥರ್ಮಲ್ ಇಂಧನವನ್ನು ಹೊರತೆಗೆಯುವ ಭಾರಿ ಸಾಧ್ಯತೆಯೂ ಇಲ್ಲಿದೆ. ಈ ಭಾಗದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎಂದು ಪೂರ್ವ ಲಡಾಖ್ನ ಅಕ್ಸಾಯ್ ಚಿನ್ ಬಗ್ಗೆ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಹೇಳಿದ್ದಕ್ಕೂ ಅಧ್ಯಯನಗಳ ಪ್ರಕಾರ ಈ ಶೀತ ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಸಂಪನ್ಮೂಲ ಇದೆ ಎಂಬುದಕ್ಕೂ ತಾಳಮೇಳವಾಗುತ್ತಿಲ್ಲ. ಹೆಚ್ಚಾಗಿ ವಿದೇಶದಿಂದಲೇ ಆಮದು ಮಾಡಿಕೊಳ್ಳುತ್ತಿರುವ ಮತ್ತು ಪೆಟ್ರೋಲ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳಿಗೆ ವಿದೇಶವನ್ನೇ ಅವಲಂಬಿಸಿರುವ ಭಾರತ ಮತ್ತು ಚೀನಾಗೆ ಈ ನಿಧಿ ಅತ್ಯಂತ ಪ್ರಮುಖವಾಗಿದೆ.
ಭಾರತವು ತನ್ನ ಶೇ. 82 ರಷ್ಟು ಅಗತ್ಯವನ್ನು ಆಮದು ಮಾಡಿಕೊಳ್ಳುತ್ತಿದೆ. 2022ರ ವೇಳೆಗೆ ದೇಶೀಯ ನಿಕ್ಷೇಪ, ನವೀಕರಿಸಬಹುದಾದ ಇಂಧನ ಮತ್ತು ಎಥನಾಲ್ ಇಂಧನವನ್ನು ಬಳಸಿಕೊಂಡು ಆಮದು ಪ್ರಮಾಣವನ್ನು ಶೇ. 67 ಕ್ಕೆ ಇಳಿಸಲು ಯೋಜನೆ ರೂಪಿಸಿಕೊಂಡಿದೆ. ಇನ್ನೊಂದೆಡೆ, ಚೀನಾ ಈಗಾಗಲೇ ಶೇ. 77 ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಕುರಿತು ಮಾತನಾಡಿದ ಹೆಸರು ಹೇಳಲಿಚ್ಛಿಸದ ಒಎನ್ಜಿಸಿ ಅಧಿಕಾರಿಯೊಬ್ಬರು ಈಟಿವಿ ಭಾರತದ ಜೊತೆ ಮಾತನಾಡಿದ್ದು, “ಲಡಾಖ್ ವಲಯದಲ್ಲಿನ ಅಪಾರ ಸಾಧ್ಯತೆಗಳ ಬಗ್ಗೆ ನಮಗೆ ಹಿಂದಿನಿಂದಲೂ ಅರಿವಿದೆ ಮತ್ತು ಇಲ್ಲಿ ಹೈಡ್ರೋಕಾರ್ಬನ್ ನಿಕ್ಷೇಪ ವ್ಯಾಪಕವಾಗಿದೆ. ಈ ಪ್ರದೇಶದ ಬಹುತೇಕ ಭಾಗವು ಟೆಥಿಸ್ ಸಮುದ್ರಕ್ಕೆ ಸೇರಿತ್ತು. ಸಾವಿರಾರು ವರ್ಷಗಳ ಹಿಂದೆ ಭೂ ಪದರಗಳು ಸರಿದಿದ್ದರಿಂದಾಗಿ ಇಲ್ಲಿ ಹಿಮಾಲಯ ಉಂಟಾಗಿದೆ. ಸಮುದ್ರದ ತಳದಲ್ಲಿ ಮಾತ್ರವೇ ಹೈಡ್ರೋಕಾರ್ಬನ್ ನಿಕ್ಷೇಪ ಇರುತ್ತದೆ ಎಂಬುದು ಸಾಮಾನ್ಯ ಸಂಗತಿ” ಎಂದಿದ್ದಾರೆ.
ಟೆಥಿನ್ ಹಿಮಾಲಯ ವಲಯವು ಲಡಾಖ್ನ ಝಂಸ್ಕಾರ್ ಪರ್ವತ ವ್ಯಾಪ್ತಿಯ 70 ಕಿ.ಮೀಯಲ್ಲಿದೆ ಮತ್ತು ಈ ಭಾಗವೇ ಶೇಲ್ ಅನಿಲ ನಿಕ್ಷೇಪದ ಸಂಭಾವ್ಯ ಗುರಿಯಾಗಿದೆ. ಪಶ್ಚಿಮಕ್ಕೆ ಝಂಸ್ಕಾರ್ ಪರ್ವತವಿದ್ದರೆ ಪೂರ್ವಕ್ಕೆ ಟಿಬೆಟ್ನ ದಕ್ಷಿಣ ಭಾಗವಿದೆ. ಪಶ್ಚಿಮ ಹಿಮಾಲಯದಲ್ಲಿ, ಟೆಥ್ಯನ್ ಹಿಮಾಲಯವು ಕಾಶ್ಮೀರ, ಝಂಸ್ಕಾರ, ಚಂಬಾ ಮತ್ತು ಸ್ಪಿತಿವರೆಗೂ ವ್ಯಾಪಿಸಿದೆ. 2018 ಸೆಪ್ಟೆಂಬರ್ನಲ್ಲಿ ಒಎನ್ಜಿಸಿ ವಿಜ್ಞಾನಿಗಳು, ಭಾರತದ ಪುರಾತತ್ವ ಇಲಾಖೆ, ಜಮ್ಮು ವಿವಿ, ಎನಿ ಅಪ್ಸ್ಟ್ರೀಮ್ ಮತ್ತು ಟೆಕ್ನಿಕಲ್ ಸರ್ವೀಸಸ್ (ಇಟಲಿ), ಪಾಕಿಸ್ತಾನ ಪೆಟ್ರೋಲಿಯಂ ಲಿಮಿಟೆಡ್ (ಪಿಪಿಎಲ್) ಮತ್ತು ಲಂಡನ್ ಯೂನಿವರ್ಸಿಟಿ ಕಾಲೇಜು ಸಲ್ಲಿಸಿದ ಸಮಗ್ರ ವರದಿಯಲ್ಲಿ ಈ ಹೈಡ್ರೋಕಾರ್ಬನ್ ನಿಕ್ಷೇಪದ ಸಾಧ್ಯತೆ ಹೆಚ್ಚಿರುವುದನ್ನು ಹೇಳಲಾಗಿದೆ.