ನವದೆಹಲಿ: ಮಲ್ಲಿಕಾರ್ಜುನ ಖರ್ಗೆ, ಗುಲಾಮ್ ನಬಿ ಆಜಾದ್, ಮುಕುಲ್ ವಾಸ್ನಿಕ್ ಮತ್ತು ಸುಶೀಲ್ ಕುಮಾರ್ ಶಿಂಧೆ ಅವರಂತಹ ಹಲವಾರು ಕಾಂಗ್ರೆಸ್ ಅನುಭವಿಗಳ ಹೆಸರುಗಳು ಗಾಂಧಿ ಪಕ್ಷದ ಅಧ್ಯಕ್ಷರ ಸಂಭಾವ್ಯರ ಪಟ್ಟಿಯಲ್ಲಿದ್ದರೂ ಅವರ ಯಶಸ್ಸಿನ ಸಾಧ್ಯತೆಗಳು ವಿರಳ.
ಗಾಂಧಿಯೇತರ ನಾಯಕತ್ವದ ಪ್ರಯೋಗ ಮೊದಲನೆಯದಾಗಿ ನಡೆಸುವುದು ಕಷ್ಟಕರ. ಒಂದು ವೇಳೆ ಇದು ಸಾಧ್ಯವಾದರೆ, ಅದು ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದೇ ಪ್ರಶ್ನೆ. ಗಾಂಧಿ ಅಲ್ಲದ ಕಾಂಗ್ರೆಸ್ ಮುಖ್ಯಸ್ಥರ ಕಲ್ಪನೆ ಹೊಸದಲ್ಲ. ಸೋನಿಯಾ ಗಾಂಧಿ 1998ರಲ್ಲಿ ಪಕ್ಷದ ಮುಖ್ಯಸ್ಥರಾಗುವ ಮೊದಲು ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಮತ್ತು ಅವರ ಉತ್ತರಾಧಿಕಾರಿ ಸೀತಾರಾಮ್ ಕೇಸರಿ ಈ ಸ್ಥಾನವನ್ನು ಅಲಂಕರಿಸಿದರು.
ಕಳೆದ ವರ್ಷ 2019 ಲೋಕಸಭಾ ಚುನಾವಣೆಯ ಕಳಪೆ ಸಾಧನೆಯ ನೈತಿಕ ಹೊಣೆ ಹೊತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ ಗೆಹ್ಲೋಟ್, ಶಿಂಧೆ, ವಾಸ್ನಿಕ್ ಮತ್ತು ಖರ್ಗೆ ಅವರಂತಹ ಅನುಭವಿಗಳ ಹೆಸರುಗಳು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುನ್ನಲೆಗೆ ಬಂದಿತ್ತು. ರಾಹುಲ್ ಅವರ ರಾಜೀನಾಮೆಯನ್ನು ಹಿಂಪಡೆಯಲು ಅವರ ಮನವೊಲಿಸುವವರೆಗೂ ಈ ಅನುಭವಿಗಳ ಹೆಸರನ್ನು ಮಧ್ಯಂತರ ವ್ಯವಸ್ಥೆಯಾಗಿ ಚರ್ಚಿಸಲಾಗಿದೆ ಎಂದು ಪಕ್ಷದ ಒಳಗಿನ ಮೂಲಗಳು ಸ್ಪಷ್ಟಪಡಿಸಿವೆ.
ಈ ಅನುಭವಿಗಳಲ್ಲಿ ಪ್ರತಿಯೊಬ್ಬರಿಗೂ ಪಕ್ಷದ ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನವಿದ್ದರೂ ನಾಯಕರು ಮತ್ತು ಸದಸ್ಯರು ಅವರ ನಾಯಕತ್ವವನ್ನು ಅನುಮೋಧಿಸಿದರೂ ಅಖಿಲ ಭಾರತ ಮಟ್ಟದಲ್ಲಿ ಪಕ್ಷ ಅಭಿಪ್ರಾಯ ಕ್ರೋಢೀಕರಿಸಿದಾಗ ನಾಯಕರು ಸೂಚಿಸಿದ ಹೆಸರುಗಳಿಗೆ ಆಯಾ ರಾಜ್ಯ ಘಟಕಗಳಿಂದ ಒಮ್ಮತ ಮೂಡಲಿಲ್ಲ. ಗೆಹ್ಲೋಟ್, ಶಿಂಧೆ, ವಾಸ್ನಿಕ್ ಮತ್ತು ಖರ್ಗೆ ಅಂತಹ ಹಿರಿಯ ನಾಯಕರು ಪೂರ್ಣಾವಧಿ ಅಥವಾ ಹಂಗಾಮಿಯಾಗಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರೆ, ಅದೊಂದು ಸಕಾರಾತ್ಮಕ ಧೋರಣೆಯಾಗಿರುತ್ತಿತ್ತು.
ಈ ಕುರಿತಾಗಿ ರಾಜ್ಯ ಘಟಕಗಳಿಂದ ಮಿಶ್ರ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ, ಪಕ್ಷದ ನೀತಿ ನಿರೂಪಕರಿಗೆ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಆದಾಗ್ಯೂ ರಾಹುಲ್ ಗಾಂಧಿಯವರು ಗಾಂಧಿಯೇತರ ಕಾಂಗ್ರೆಸ್ ನಾಯಕತ್ವಕ್ಕಾಗಿ ಒತ್ತಾಯ ಮುಂದುವರಿಸಿದರು. ನಾಯಕರ ಆಯ್ಕೆಯು ಆಕಸ್ಮಿಕವಾಗಿ ಅಥವಾ ಪೂರ್ವ ಉದ್ದೇಶದಿಂದಲೋ ಸೋನಿಯಾ ಗಾಂಧಿಯವರ ಹೆಗಲ ಮೇಲೆ ಬಿದ್ದಿತು. ಅವರು 19 ವರ್ಷಗಳ ಸುದೀರ್ಘ ಅವಧಿಗೆ ಕಾಂಗ್ರೆಸ್ ಅನ್ನು ನಡೆಸಿದ ನಂತರ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲು ಒಪ್ಪಿಗೆ ಸೂಚಿಸಿದರು. ಆದರೆ, ಒಂದು ವರ್ಷದೊಳಗೆ ಪೂರ್ಣಾವಧಿ ಅಧ್ಯಕ್ಷರ ನೇಮಕ ಮಾಡಬೇಕು ಎಂಬ ಷರತ್ತಿನೊಂದಿಗೆ ಈ ಜವಾಬ್ದಾರಿಯನ್ನು ಹೊತ್ತಿದ್ದರು. ಆದರೆ, ಈ ಬೆಳವಣಿಗೆಯ ಮುಂದಿನ 12 ತಿಂಗಳುಗಳಲ್ಲಿ ಪೂರ್ಣಾವಧಿ ಅಧ್ಯಕ್ಷರನ್ನು ನೇಮಕ ಮಾಡುವ ಕುರಿತು ಪಕ್ಷದಲ್ಲಿ ಯಾವುದೇ ಸಿದ್ದತೆಯಾಗಲಿ, ಸ್ಪಷ್ಟತೆಯಾಗಲಿ ಇರಲಿಲ್ಲ.
ಆದರೆ, ರಾಹುಲ್ ಅವರ ಪುನರಾಗಮನದ ಬಗ್ಗೆ ಕಾಂಗ್ರೆಸ್ ವಲಯಗಳಲ್ಲಿ ಗುಸುಗುಸು ಆರಂಭವಾಗಿತ್ತು. ರಾಹುಲ್ ತನ್ನ ತಾಯಿಯಿಂದ ಅಧಿಕಾರ ವಹಿಸಿಕೊಳ್ಳಲು ಹಿಂಜರಿಯುತ್ತಿರುವುದರಿಂದ ಪಕ್ಷದಿಂದ ಕೆಲವು ಸೋನಿಯಾ ಪರ ಧ್ವನಿಗಳು ಹೊರಹೊಮ್ಮುತ್ತಿದ್ದವು. ಭವಿಷ್ಯದಲ್ಲಿ ಅವರೇ ಹಂಗಾಮಿ ಅಧ್ಯಕ್ಷರಾಗಿಮುಂದುವರಿಯಬೇಕೆಂದು ಸೋನಿಯಾ ಅನುಯಾಯಿಗಳು ಒತ್ತಾಯಿಸಿದರು. ಕಳೆದ ಒಂದು ವರ್ಷದಲ್ಲಿ ಯುವ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಸಮಾಧಾನ ಪಡಿಸಲು ಕಾಂಗ್ರೆಸ್ ನಾಯಕತ್ವಕ್ಕೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಬಿಜೆಪಿಯ ರಾಜಕೀಯ ಚದುರಂಗದಾಟವನ್ನು ಕಾಂಗ್ರೆಸ್ ನಾಯಕರು ತಡೆಯುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಅದೇ ರೀತಿ 2020ರ ಮಾರ್ಚ್‌ನಲ್ಲಿ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸಿದಾಗಲೂ ಕಾಂಗ್ರೆಸ್ ಪಕ್ಷದ ನಾಯಕರು ಯಾವುದೇ ಪ್ರಯತ್ನ ನಡೆಸಲಿಲ್ಲ. ಕಾಂಗ್ರೆಸ್ ಪಕ್ಷ ಈ ಎಲ್ಲಾ ಬೆಳವಣಿಗೆಗಳನ್ನು ಅಸಹಾಯಕತೆಯಿಂದ ವೀಕ್ಷಿಸಬೇಕಾಯಿತು.
ಮಧ್ಯ ಪ್ರದೇಶದ ಮಾದರಿಯಂತೆ ರಾಜಸ್ಥಾನದಲ್ಲಿ ಕೂಡ ಬಿಜೆಪಿ ತನ್ನ ಕಾರ್ಯಾಚರಣೆ ಮುಲಕ ಸರಕಾರ ಉರುಳಿಸಬಹುದು ಎಂದು ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಅಶೋಕ್ ಗೆಹ್ಲೋಟ್ ಅವರ ಸರ್ಕಾರ ಜುಲೈನಲ್ಲಿ ಪತನಗೊಳ್ಳುವ ಸ್ಥಿತಿ ತಲಪುವ ವರೆಗೂ ಕಾಂಗ್ರೆಸ್ ನೀತಿ ನಿರೂಪಕರು ಕೈಕಟ್ಟಿ ಕುಳಿತಿದ್ದರು. ಈ ಎರಡು ಘಟನೆಗಳು ಕಾಂಗ್ರೆಸ್ ತನ್ನ ಸೋಮಾರಿತನದಿಂದ ಹಾಗೂ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗದ ವಿರೋಧ ಪಕ್ಷವಾಗಿ ಮಾರ್ಪಟ್ಟಿದೆ ಮತ್ತು ಸಮಯೋಚಿತ ಕಾರ್ಯ ಕ್ಷಮತೆ ಇಲ್ಲದೆ ಬಳಲುತ್ತಿದೆ ಎಂದು ತೋರಿಸಿದೆ. ಈ ರೀತಿಯಾಗಿ ಪಕ್ಷ ಮುಳುಗಿ ಹೋಗುತ್ತದೆ ಎಂಬ ಭೀತಿಯಿಂದ 23 ಮಂದಿ ಹಿರಿಯ ಕಾಂಗ್ರೆಸಿಗರು ಸೊನಿಯಾ ಗಾಂಧಿಯವರಿಗೆ ಪತ್ರ ಬರೆದು ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರನ್ನು ತಕ್ಷಣವೇ ನೇಮಕ ಮಾಡಬೇಕು ಹಾಗೂ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು ಎಂದು ಒತ್ತಾಯಿಸಿದರು.
ಆಗಸ್ಟ್ 24ರಂದು ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯು ಭಿನ್ನಮತೀಯರ ಭರವಸೆಯನ್ನು ಹುಸುಕಿ ಹಾಕಿತು ಮತ್ತು ಗಾಂಧಿ ಕುಟುಂಬ ಪಕ್ಷದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ ಎಂದು ಮತ್ತೊಮ್ಮೆ ಸಾಬೀತಾಯಿತು. ಈ ಹಿನ್ನೆಲೆಯಲ್ಲಿ ಗಾಂಧಿಯೇತರ ಪಕ್ಷದ ಅಧ್ಯಕ್ಷರ ಕುರಿತ ಯಾವುದೇ ಚರ್ಚೆಗಳು ಬಂಡಾಯ ಕಾಂಗ್ರೆಸ್ ನಾಯಕರು ಇನ್ನೊಮ್ಮೆ ಒಟ್ಟುಗೂಡುವರೆಗೂ ಮತ್ತು ಪಕ್ಷವನ್ನು ಇಬ್ಬಾಗ ಮಾಡುವವರೆಗೂ ಅರ್ಥಹೀನ. ಆದರೆ, ಆ ಸಾಧ್ಯತೆ ತೀರ ಅಸಂಭವವಾಗಿದೆ. ಗಾಂಧಿಯೇತರರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಹಿಂದಿನ ವಾದಗಳು ಮತ್ತು ವ್ಯಕ್ತಿಯು ಅವನ ಅಥವಾ ಅವಳ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶ ನೀಡುವುದು ತಾರ್ಕಿಕವಾಗಿ ಉತ್ತಮವಾಗಿದೆ. ಆದರೆ, ಅದನ್ನು ಕಾರ್ಯಗತಗೊಳಿಸಲು ಕಷ್ಟ.
ಪ್ರಮುಖ ಅಂಶವೆಂದರೆ ನಾಲ್ವರು ಹಿರಿಯ ಕಾಂಗ್ರೆಸ್ ನಾಯಕರಿಗೆ ಪಕ್ಷದ ಅಧ್ಯಕ್ಷರಾಗುವ ಅವಕಾಶ ಈ ಹಿಂದೆ ಲಭಿಸಿದ್ದರೂ ಅತ್ಯಂತ ಹಳೆಯ ಪಕ್ಷವನ್ನು ಮುನ್ನೆಡಸಲು ಒಂದೇ ಹೆಸರನ್ನು ಸೂಚಿಸಲು ವಿಫಲರಾದರು. ಈ ಅಂಶವನ್ನು ಗಮನಿಸಿದರೆ ಆಜಾದ್, ಖರ್ಗೆ, ಶಿಂಧೆ ಅಥವಾ ಸಿಬಲ್ ಅಥವಾ ವಾಸ್ನಿಕ್ ಅವರು ಪಕ್ಷವನ್ನು ಒಟ್ಟಾಗಿ ಕೊಂಡೊಯ್ಯಲು ಕಷ್ಟಕರ. ಇದಕ್ಕೆ ಹೊರತಾಗಿ ಗಾಂಧಿ ಕುಟುಂಬ ತಮ್ಮ ನ್ಯೂನತೆಗಳ ನಡುವೆಯೂ ಪ್ರಧಾನಿ ಮೋದಿ ನೇತೃತ್ವದ ಆಕ್ರಮಣಕಾರಿ ಭಾರತೀಯ ಜನತಾ ಪಕ್ಷ ಒಡ್ಡುತ್ತಿರುವ ಸವಾಲು ಎದುರಿಸಲು ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಟ ಸಹಾಯ ಮಾಡುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ ದಶಕಗಳಿಂದ ಕಾಂಗ್ರೆಸ್ ಸಂಘಟನೆಯನ್ನು ಗಾಂಧಿಯೇತರ ಪಕ್ಷದ ಮುಖ್ಯಸ್ಥರು ಮುನ್ನೆಡಸಬೇಕಾದರೆ ಗಾಂಧಿ ಕುಟುಂಬದ ಬೆಂಬಲ ಬೇಕೇ ಬೇಕು. ಇಲ್ಲದಿದ್ದರೆ, ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಗಾಂಧಿ ಕುಟುಂಬ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಮೇಲೆ ತಮ್ಮ ಪ್ರಭಾವವನ್ನು ಮುಂದುವರಿಸುತ್ತಾರೆ ಮತ್ತು ಎರಡು ಶಕ್ತಿ ಕೇಂದ್ರಗಳ ಸ್ಥಾಪನೆಗೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ಪ್ರಧಾನಿ ಮೋದಿ ಮತ್ತು ಯಾವುದೇ ಹಿರಿಯ ಬಿಜೆಪಿ ಕಾರ್ಯಕರ್ತರ ರಾಜಕೀಯ ದಾಳಿಯ ಮೊದಲ ಗುರಿ ಗಾಂಧಿ ಕುಟುಂಬವೇ ಹೊರತು ಹಿರಿಯ ಕಾಂಗ್ರೆಸ್ ನಾಯಕರಲ್ಲ ಎಂಬುದು ಈ ಸಂದರ್ಭದಲ್ಲಿ ಗಮನಾರ್ಹವಾಗಿದೆ. ಆದಾಗ್ಯೂ ಇದು ಪಕ್ಷವನ್ನು ಮುನ್ನಡೆಸಲು ಗಾಂಧಿ ಕುಟುಂಬಕ್ಕೆ ಜೀವನ ಪರ್ಯಂತ ಅನುಮತಿಯನ್ನು ನೀಡುವುದಿಲ್ಲ. ಆದರೆ, ಪಕ್ಷದ ಕಾರ್ಯ ನಿರ್ವಹಣೆ ಕುರಿತು ಆಮೂಲಾಗ್ರ ಬದಲಾವಣೆಗಳನ್ನು ತರುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಆದರೆ, ಹಲವರಿಗೆ ನೋವನ್ನುಂಟು ಮಾಡಿದರೂ ಪಕ್ಷವನ್ನು ಬಲಪಡಿಸಲು ಸೂಕ್ತ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅಗತ್ಯ ಕಾಂಗ್ರೆಸ್ ಪಕ್ಷಕ್ಕಿದೆ.
ಪಕ್ಷ ಸಾಧ್ಯವಾದಷ್ಟು ಬೇಗ ಪಕ್ಷಕ್ಕಾಗುವ ಹಾನಿಯನ್ನು ಸರಿಪಡಿಸುವುದು ಯೋಗ್ಯ ನಿರ್ಧಾರ. ವಿಳಂಬವಾದರೆ ಭಿನ್ನ ಮತೀಯ ಕಾಂಗ್ರೆಸಿಗರು ಇನ್ನೊಮ್ಮೆ ಒಗ್ಗೂಡಿ ನಾಯಕತ್ವ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆ ಇದೆ. ಇದರೊಂದಿಗೆ ಭಿನ್ನ ಮತೀಯರ ಗುಂಪು ಬಲಗೊಳ್ಳುವ ಸಾಧ್ಯತೆ ಇದೆ. ರಾಹುಲ್ ಗಾಂಧಿಯವರಯ 23 ಭಿನ್ನಮತೀಯ ಕಾಂಗ್ರೆಸ್ ನಾಯಕರಲ್ಲೊಬ್ಬರಾದ ಗುಲಾಮ್ ನಬಿ ಆಜಾದ್ ಅವರನ್ನು ಸಂಪರ್ಕಿಸಿ ಸಮಾಧಾನಗೊಳಿಸಿರುವುದು ಉತ್ತಮ ಬೆಳವಣಿಗೆ. ಆದರೆ, ಪಕ್ಷವನ್ನು ಉಳಿಸಲು ಮತ್ತು ಬೆಳೆಸಲು ಗಾಂಧಿ ಕುಟುಂಬದಿಂದ ಇನ್ನಷ್ಟು ನಿರೀಕ್ಷೆಯಿದೆ.