ಕರ್ನಾಟಕ

karnataka

ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿಯ ಗರಿ: ಏನಿದು ಕಪ್ಪು ಕುಳಿ?

ಮಹಿಳಾ ವಿಜ್ಞಾನಿ ಸೇರಿ ಮೂವರಿಗೆ 2020ನೇ ಸಾಲಿನ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿದೆ. ಕಪ್ಪು ಕುಳಿಗೆ (black hole) ಸಂಬಂಧಿಸಿದ ಮಹತ್ವದ ಸಂಶೋಧನೆಗಳಿಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 'ಕಪ್ಪು ರಂಧ್ರ' - ಅದು ವಿಶ್ವದ, ನಕ್ಷತ್ರ ಲೋಕದ ಒಂದು ವಿಶಿಷ್ಟ ಪ್ರದೇಶ. ವಾಸ್ತವವಾಗಿ ಅದು ಬೃಹತ್ ನಕ್ಷತ್ರವೊಂದರ ಮರಣದ ಪರಿಣಾಮವಾಗಿ ರೂಪುಗೊಂಡ ನಕ್ಷತ್ರಾವಶೇಷ ಸಹಿತ ಪ್ರದೇಶ. 'ಪರಮ ಸಾಂದ್ರತೆಯ, ಕಲ್ಪನಾತೀತ ಗುರುತ್ವ ಶಕ್ತಿಯ, ಅತ್ಯಂತ ಕುಬ್ಜ ಗಾತ್ರದ ಒಂದು ಕಾಯ ಮತ್ತು ಅದನ್ನು ಆವರಿಸಿದ, ಬೆಳಕಿನ ಸುಳಿವೂ ಇಲ್ಲದ, ಗಾಢ ಅಂಧಕಾರದ, ತೀವ್ರ ಗುರುತ್ವದ ಒಂದು ವಿಸ್ತಾರ ಪ್ರದೇಶ'

By

Published : Oct 6, 2020, 9:07 PM IST

Published : Oct 6, 2020, 9:07 PM IST

Updated : Oct 6, 2020, 9:18 PM IST

ETV Bharat / bharat

ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿಯ ಗರಿ: ಏನಿದು ಕಪ್ಪು ಕುಳಿ?

ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿ
ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿ

ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2020ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ರೋಜರ್‌ ಪೆನ್ರೋಸ್‌, ರೈನ್‌ಹಾರ್ಡ್ ಗೆಂಜೆಲ್‌ ಮತ್ತು ಆ್ಯಂಡ್ರಿಯಾ ಘೇಜ್ ಅವರಿಗೆ ಘೋಷಿಸಿದೆ. ಕಪ್ಪು ಕುಳಿ (black hole)ಗೆ ಸಂಬಂಧಿಸಿದ ಸಂಶೋಧನೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಶಸ್ತಿಯ ಅರ್ಧ ಮೊತ್ತ ರೋಜರ್‌ ಪೆನ್ರೋಸ್‌ ಹಾಗೂ ಉಳಿದ ಅರ್ಧ ಭಾಗವನ್ನು ರೈನ್‌ಹಾರ್ಡ್ ಗೆಂಜೆಲ್‌ ಮತ್ತು ಆ್ಯಂಡ್ರಿಯಾ ಘೇಜ್ ಅವರಿಗೆ ಹಂಚಿಕೆಯಾಗಲಿದೆ.

ಮೂರು ಪ್ರಶಸ್ತಿ ಪುರಸ್ಕೃತರ ಸಂಕ್ಷಿಪ್ತ ವಿವರ:

ರೋಜರ್ ಪೆನ್ರೋಸ್: ಇಂಗ್ಲೆಂಡ್​​ ದೇಶಕ್ಕೆ ಸೇರಿರುವ ಇವರು ಇವರು 1931ರಲ್ಲಿ ಜನಿಸಿದ್ದಾರೆ. ಕಪ್ಪು ಕುಳಿಗಳು ಆಲ್ಬರ್ಟ್‌ ಐನ್‌ಸ್ಟೀನ್‌ ಅವರ ಸಾಪೇಕ್ಷ ಸಿದ್ಧಾಂತದ ನೇರ ಫಲಿತಾಂಶವಾಗಿರುವುದನ್ನು ಗಣಿತದ ವಿಧಾನಗಳಿಂದ ಪ್ರಮಾಣೀಕರಿಸಿದ್ದಾರೆ. ಕಪ್ಪು ಕುಳಿಗಳ ಇರುವಿಕೆಯನ್ನು ಸ್ವತಃ ಐನ್‌ಸ್ಟೀನ್‌ ಸಹ ನಂಬಿರಲಿಲ್ಲ. ದೈತ್ಯ ಮತ್ತು ಘನವಾದ ಕಪ್ಪು ಕುಳಿಗಳು ಅದರತ್ತ ಸಾಗುವ ಎಲ್ಲವನ್ನೂ ಸೆಳೆದುಕೊಂಡು ಬಿಡುತ್ತವೆ. ಬೆಳಕೂ ಸಹ ಕಪ್ಪು ಕುಳಿಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿರುವ ಇವರು, ಕಪ್ಪು ಕುಳಿಗಳು ನಿಜಕ್ಕೂ ಸೃಷ್ಟಿಯಾಗಬಹುದೆಂದು ನಿರೂಪಿಸಿದ್ದಾರೆ. ಹಾಗೂ ಈ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ.

ರೈನ್‌ಹಾರ್ಡ್ ಗೆಂಜೆಲ್‌: 24 ಮಾರ್ಚ್ 1952, ಬ್ಯಾಡ್ ಹೊಂಬರ್ಗ್ ವೋರ್ ಡೆರ್ ಹೋಹೆ, ಜರ್ಮನಿಯಲ್ಲಿ ಜನಿಸಿದ್ದು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ, ಕೆನಡಾ, ಅಮೆರಿಕ, ಮ್ಯಾಕ್ಸ್ ಪ್ಲ್ಯಾಂಕ್, ಜರ್ಮನಿಯ ಇನ್ಸ್ಟಿಟ್ಯೂಟ್ ಫಾರ್ ಎಕ್ಸ್ಟ್ರಾಟೆರೆಸ್ಟ್ರಿಯಲ್ ಫಿಸಿಕ್ಸ್​ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ನಮ್ಮ ನಕ್ಷತ್ರ ಪುಂಜದ ಮಧ್ಯ ಭಾಗದಲ್ಲಿ ಅತ್ಯಂತ ಘನವಾದ ವಸ್ತುವಿನ ಇರುವಿಕೆ ಪತ್ತೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಆ್ಯಂಡ್ರಿಯಾ ಘೇಜ್‌: ಇವರು ಅಮೆರಿಕದ ನ್ಯೂಯಾರ್ಕ್​ನಲ್ಲಿ1965 ರಲ್ಲಿ ಜನಿಸಿದ್ದು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ನಮ್ಮ ನಕ್ಷತ್ರ ಪುಂಜದ ಮಧ್ಯ ಭಾಗದಲ್ಲಿ ಅತ್ಯಂತ ಘನವಾದ ವಸ್ತುವಿನ ಪತ್ತೆಯಲ್ಲಿ ಪ್ರಮುಖ ಪಾತ್ರವಹಿಸಿದ ಕಾರಣಕ್ಕಾಗಿ ಆಯ್ಕೆ ಸಮಿತಿ ಇವರಿಗೆ ನೊಬೆಲ್​ ನೀಡಿ ಗೌರವಿಸಿದೆ

ಭೌತಶಾಸ್ತ್ರಕ್ಕೆ ಸಿಕ್ಕ ನೊಬೆಲ್ ಬಹುಮಾನದ ಕುರಿತು ಕೆಲವು ಮಾಹಿತಿ:

ಭೌತಶಾಸ್ತ್ರ ಬಹುಮಾನಗಳು: 114

ಭೌತಶಾಸ್ತ್ರ ಪ್ರಶಸ್ತಿ ವಿಜೇತರು: 216

ಪ್ರಶಸ್ತಿ ಪಡೆದ ಮಹಿಳೆಯರು: 4

ಕಿರಿಯ ವಯಸ್ಸಿನಲ್ಲಿ ಪ್ರಶಸ್ತಿ ವಿಜೇತರು: 25

ಹೆಚ್ಚು ವಯಸ್ಸಾದಾಗ ಪ್ರಶಸ್ತಿ ಪಡೆದವರು: 96

1901 ರಿಂದ ಭೌತಶಾಸ್ತ್ರದಲ್ಲಿ 114 ನೊಬೆಲ್ ಬಹುಮಾನಗಳನ್ನು ನೀಡಲಾಗಿದೆ. ಇದನ್ನು ಆರು ಸಂದರ್ಭಗಳಲ್ಲಿ ನೀಡಲಾಗಿಲ್ಲ: ಅವುಗಳೆಂದರೇ 1916, 1931, 1934, 1940, 1941 ಮತ್ತು 1942.

ಭೌತಶಾಸ್ತ್ರದಲ್ಲಿ ಹಂಚಿದ ಮತ್ತು ಹಂಚಿಕೊಳ್ಳದ ನೊಬೆಲ್ ಬಹುಮಾನಗಳು:

47 ಬಾರಿ ಭೌತಶಾಸ್ತ್ರ ಬಹುಮಾನಗಳನ್ನು ಒಬ್ಬರಿಗೆ ಮಾತ್ರ ಘೋಷಿಸಲಾಗಿದೆ.

32 ಭೌತಶಾಸ್ತ್ರ ಬಹುಮಾನಗಳನ್ನು ಇಬ್ಬರು ಪ್ರಶಸ್ತಿ ವಿಜೇತರು ಹಂಚಿಕೊಂಡಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಭೌತಶಾಸ್ತ್ರ ಪ್ರಶಸ್ತಿ ವಿಜೇತರು: ಇಲ್ಲಿಯವರೆಗೆ ಭೌತಶಾಸ್ತ್ರದಲ್ಲಿ ಅತ್ಯಂತ ಕಿರಿಯ ನೊಬೆಲ್ ಪ್ರಶಸ್ತಿ ವಿಜೇತ ಎಂಬ ಖ್ಯಾತಿ ಲಾರೆನ್ಸ್ ಬ್ರಾಗ್ ಅವರಿಗೆ ಸಲ್ಲುತ್ತದೆ. 1915ರಲ್ಲಿ ತನ್ನ ತಂದೆಯೊಂದಿಗೆ ನೊಬೆಲ್ ಪ್ರಶಸ್ತಿ ಪಡೆದಾಗ ಅವರಿಗೆ 25 ವರ್ಷವಾಗಿತ್ತು.

ಹೆಚ್ಚು ವಯಸ್ಸಾದಾಗ ಭೌತಶಾಸ್ತ್ರ ಪ್ರಶಸ್ತಿ ಪಡೆದವರು: ಭೌತಶಾಸ್ತ್ರದಲ್ಲಿ ಇಲ್ಲಿಯವರೆಗಿನ ಅತ್ಯಂತ ಹೆಚ್ಚು ವಯಸ್ಸಾದಾಗ ನೊಬೆಲ್ ಪ್ರಶಸ್ತಿ ಪಡೆದವರು ಎಂದರೆ ಅವರು ಆರ್ಥರ್ ಆಶ್ಕಿನ್ ಮಾತ್ರ. ಅವರು 2018ರಲ್ಲಿ ನೊಬೆಲ್ ಪ್ರಶಸ್ತಿ ಪಡೆದಾಗ 96 ವರ್ಷ ವಯಸ್ಸಿನವರಾಗಿದ್ದರು.

ಭೌತಶಾಸ್ತ್ರದಲ್ಲಿ ಬಹು ನೊಬೆಲ್ ಪ್ರಶಸ್ತಿ ವಿಜೇತರು: 1956 ಮತ್ತು 1972 ರಲ್ಲಿ ಎರಡು ಬಾರಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಜಾನ್ ಬಾರ್ಡೀನ್. ಮೇರಿ ಕ್ಯೂರಿಗೆ ಎರಡು ಬಾರಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಒಮ್ಮೆ ಭೌತಶಾಸ್ತ್ರ 1903 ರಲ್ಲಿ ಮತ್ತು ರಾಸಾಯನಶಾಸ್ತ್ರಕ್ಕೆ 1911ರಲ್ಲಿ ನೀಡಲಾಯಿತು.

ಕಪ್ಪು ಕುಳಿಗಳ ಬಗ್ಗೆ ಕೆಲವು ಸಂಗತಿಗಳು:

1915ರಲ್ಲಿ ಪ್ರಕಟವಾದ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದಲ್ಲಿ, ನಮ್ಮ ಬ್ರಹ್ಮಾಂಡವು ಅಂತಹ ವಿಚಿತ್ರವಾದ, ದಟ್ಟವಾದ, ಬೃಹತ್ ವಸ್ತುಗಳನ್ನು ಒಳಗೊಂಡಿದೆ ಎಂದು ಮೊದಲ ಬಾರಿ ಹೇಳಿದ ವ್ಯಕ್ತಿ ಎಂದರೆ ಅದು ಆಲ್ಬರ್ಟ್ ಐನ್‌ಸ್ಟೈನ್.

ಬೃಹತ್ ನಕ್ಷತ್ರಗಳ ಸಾವು ಮತ್ತು ಕುಸಿತದ ನೈಸರ್ಗಿಕ ಪರಿಣಾಮವಾಗಿ ಐನ್‌ಸ್ಟೈನ್‌ನ ಸಾಮಾನ್ಯ ಸಾಪೇಕ್ಷತೆಯ ಸಮೀಕರಣಗಳಿಂದ ಕಪ್ಪು ಕುಳಿಗಳು ಹೊರಹೊಮ್ಮುತ್ತವೆ. ಕಪ್ಪು ಕುಳಿಗಳನ್ನು ಗಣಿತಶಾಸ್ತ್ರದಲ್ಲಿ ರೂಪಿಸಿದ ಮೊದಲ ವ್ಯಕ್ತಿ 1916ರಲ್ಲಿ ಜರ್ಮನ್ ಗಣಿತಜ್ಞ ಕಾರ್ಲ್ ಶ್ವಾರ್ಜ್‌ಚೈಲ್ಡ್.

ಸೈದ್ಧಾಂತಿಕ ಭೌತಶಾಸ್ತ್ರಜ್ಞ ಜಾನ್ ವೀಲರ್ 1967 ರಲ್ಲಿ ಮೊದಲ ಬಾರಿಗೆ ಕಪ್ಪು ಕುಳಿ ಎಂಬ ಹೆಸರನ್ನು ನೀಡಿದರು.1970 ರ ದಶಕದವರೆಗೆ, ಕಪ್ಪು ಕುಳಿಗಳನ್ನು ಸಾಮಾನ್ಯವಾಗಿ ಗಣಿತದ ಕುತೂಹಲ ಎಂದು ಮಾತ್ರ ಪರಿಗಣಿಸಲಾಗುತ್ತಿತ್ತು.

ಕಪ್ಪು ರಂಧ್ರ ಎಂದರೇನು: ಕಪ್ಪು ಕುಳಿ (black hole) ಎಂದರೆ ಬಾಹ್ಯಾಕಾಶದಲ್ಲಿನ ಗುರುತ್ವಾಕರ್ಷಣೆಯನ್ನು ತನ್ನಡೆಗೆ ಸೆಳೆಯುವ ಸ್ಥಳವಾಗಿದ್ದು, ಬೆಳಕು ಸಹ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಗುರುತ್ವಾಕರ್ಷಣೆಯು ತುಂಬಾ ಪ್ರಬಲವಾಗಿದೆ. ನಕ್ಷತ್ರವೊಂದರ ಕೊನೆಯ ಅವಸಾನದ ಕೊನೆಯ ಹಂತವೇ ಈ ಕಪ್ಪು ರಂಧ್ರ. ನಕ್ಷತ್ರವೊಂದು ಅವಸಾನವಾಗಿ ಕಂಪು ರಂದ್ರವಾಗಿ ಪರಿವರ್ತನೆ ಆಗುತ್ತೆ. ಈ ಹಂತದಲ್ಲಿ ಯಾವುದೇ ಬೆಳಕು ಹೊರಬರಲು ಸಾಧ್ಯವಿಲ್ಲದ ಕಾರಣ ಜನರು ಕಪ್ಪು ಕುಳಿಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಅವು ಅದೃಶ್ಯವಾಗಿರುತ್ತವೆ. ವಿಶೇಷ ಪರಿಕರಗಳನ್ನು ಹೊಂದಿರುವ ಬಾಹ್ಯಾಕಾಶ ದೂರದರ್ಶಕಗಳು ಕಪ್ಪು ರಂಧ್ರಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತವೆ. ಕಪ್ಪು ಕುಳಿಗಳಿಗೆ ಬಹಳ ಹತ್ತಿರವಿರುವ ನಕ್ಷತ್ರಗಳು ಇತರ ನಕ್ಷತ್ರಗಳಿಗಿಂತ ಹೇಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿಶೇಷ ಉಪಕರಣಗಳಿಂದ ನೋಡಬಹುದಾಗಿದೆ.

'ಕಪ್ಪು ರಂಧ್ರ' - ಏಕೆ ಈ ಹೆಸರು?ಈಗಾಗಲೇ ಹೇಳಿದಂತೆ ಕಪ್ಪು ರಂಧ್ರದ ಪ್ರದೇಶದಿಂದ ದೃಗ್ಗೋಚರ ಬೆಳಕು ಕಿಂಚಿತ್ತೂ ಹೊಮ್ಮುವುದಿಲ್ಲ. ಏಕೆಂದರೆ, ಕಪ್ಪು ರಂಧ್ರದ ಪರಮ ಗುರುತ್ವದಿಂದಾಗಿ ಅದರ 'ವಿಮೋಚನಾ ವೇಗ' ಅತ್ಯಧಿಕ. ಎಷ್ಟೆಂದರೆ, ಅದು ಸೆಕೆಂಡ್​​​ಗೆ ಮೂರು ಲಕ್ಷ ಕಿಲೋ ಮೀಟರ್ಗಿಂತ ಹೆಚ್ಚು. ಸೆಕೆಂಡ್​​​​ಗೆ ಮೂರು ಲಕ್ಷ ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲ ಬೆಳಕಿನ ಕಣಗಳೂ ಕಪ್ಪು ರಂಧ್ರದ ಗುರುತ್ವದ ಸೆಳೆತದಿಂದ ತಪ್ಪಿಸಿಕೊಂಡು ಹೊರ ಬರುವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟ ತಾನೇ? ಹಾಗಾಗಿ ಕಪ್ಪಾದ, ವೃತ್ತಾಕಾರದ, ಬೃಹತ್ ರಂಧ್ರಸದೃಶ ಸ್ವರೂಪವನ್ನು ಪಡೆದಿರುವುದರಿಂದ ಈ ಕಾಯಗಳಿಗೆ ಕಪ್ಪು ರಂಧ್ರ ಎಂಬ ರೂಪಾನ್ವಯ ಹೆಸರು. ಅಮೆರಿಕದ ವಿಖ್ಯಾತ ಭೌತ ವಿಜ್ಞಾನಿ ಜಾನ್ ವೀಲರ್ 1967ರಲ್ಲಿ ಪ್ರಥಮ ಬಾರಿಗೆ ಬಳಸಿದ ಈ ಹೆಸರು ಇಂದಿಗೂ ಹಾಗೆಯೇ ಉಳಿದಿದೆ.

3. ಕಪ್ಪು ರಂಧ್ರಗಳು ಮೈದಳೆಯುವುದು ಹೇಗೆ?

ಕಪ್ಪು ರಂಧ್ರದ ಜನನ - ಅದು ವಿಶ್ವದ ಒಂದು ಪರಮ ಭೀಕರ, ಅತ್ಯಂತ ವಿಸ್ಮಯಕರ ವಿದ್ಯಮಾನ. ಅಸಾಧಾರಣ ಪ್ರಮಾಣದ ದ್ರವ್ಯದ ದೈತ್ಯ ತಾರೆಗಳ ಬದುಕಿನ ಅಂತ್ಯದಲ್ಲಿ ಸಂಭವಿಸುವಂಥ ವಿದ್ಯಮಾನವೇ ಕಪ್ಪು ರಂಧ್ರಗಳ ಅವತರಣಕ್ಕೆ ಕಾರಣ.

ವಿಶ್ವದಲ್ಲಿನ ಎಲ್ಲ ನಕ್ಷತ್ರಗಳ ಬದುಕು ಅಂತ್ಯಗೊಳ್ಳುವ ಕ್ರಮ ಏಕರೂಪದ್ದಲ್ಲ. ನಮ್ಮ ಸೂರ್ಯನಂತಹ ತುಂಬ ಸಾಮಾನ್ಯ ದ್ರವ್ಯರಾಶಿಯ ನಕ್ಷತ್ರಗಳು ತಮ್ಮ ಜೀವಿತದ ಸ್ಥಿರ ಸ್ಥಿತಿಯ ಹಂತವನ್ನು ದಾಟಿ, ಭಾರೀ ಗಾತ್ರಕ್ಕೆ ಉಬ್ಬಿ 'ಕೆಂಪು ದೈತ್ಯ'ರಾಗುತ್ತವೆ. ಅಲ್ಲಿಂದ ಮುಂದೆ ಅವುಗಳ ಅವಸಾನದ ಸಮಯದಲ್ಲಿ ಹೊರ ಪದರಗಳೆಲ್ಲ ಕಳಚಿ ಅವು 'ಗ್ರಹೀಯ ನೀಹಾರಿಕೆ' ಆಗುತ್ತವೆ. ಹಾಗೆ ಚದುರುವ ಅನಿಲ ರಾಶಿಯ ಮಧ್ಯದಲ್ಲಿ ಮೂಲ ನಕ್ಷತ್ರದ ಅವಶೇಷ ಸಾಂದ್ರವಾದ, ಪುಟ್ಟ ಗಾತ್ರದ, ಜ್ವಲಂತವಾದ 'ಶ್ವೇತ ಕುಬ್ಜ'ವಾಗಿ ಉಳಿಯುತ್ತದೆ

ಆದರೆ, ಸೂರ್ಯನ ಹತ್ತು ಮಡಿಗೂ ಅಧಿಕ ದ್ರವ್ಯರಾಶಿಯ ದೈತ್ಯ ನಕ್ಷತ್ರಗಳು ಸ್ಥಿರ ಹಂತದ ನಂತರ 'ಸೂಪರ್ ಕೆಂಪು ದೈತ್ಯ'ರಾಗಿ ಕಡೆಗೆ ಕಲ್ಪನಾತೀತ ಶಕ್ತಿಯ 'ಸೂಪರ್ ನೋವಾ' ಮಹಾ ಸ್ಫೋಟದೊಡನೆ ಅಂತ್ಯ ಕಾಣುತ್ತವೆ. ಅವುಗಳ ಅತ್ಯಂತ ಸಾಂದ್ರ ಗರ್ಭ 'ನ್ಯೂಟ್ರಾನ್ ನಕ್ಷತ್ರ'ವಾಗಿ ಉಳಿಯುತ್ತದೆ. ನ್ಯೂಟ್ರಾನ್ ನಕ್ಷತ್ರಗಳಲ್ಲಿ ಅಡಕಗೊಳ್ಳುವ ದ್ರವ್ಯದ ಸಾಂದ್ರತೆ ಎಷ್ಟಿರುತ್ತದೆಂದರೆ ಅದರ ಒಂದು ಗೋಲಿ ಗಾತ್ರದ ದ್ರವ್ಯ ಕನಿಷ್ಠ ಒಂದು ನೂರು ಕೋಟಿ ಟನ್ ತೂಗಬಹುದು!

ನಮ್ಮ ಸೂರ್ಯನ ದ್ರವ್ಯರಾಶಿಯ ಇಪ್ಪತ್ತು ಮಡಿ ಮತ್ತು ಅದಕ್ಕೂ ಅಧಿಕ ದ್ರವ್ಯರಾಶಿಯ ಪರಮ ದೈತ್ಯ ನಕ್ಷತ್ರಗಳು ಕೆಂಪು ದೈತ್ಯ ಹಂತದ ನಂತರದ ಸೂಪರ್ ನೋವಾ ಸ್ಫೋಟದ ಸಮಯವನ್ನು ತಲುಪಿದಾಗ ಅವುಗಳ ದ್ರವ್ಯದ ಬಹುಭಾಗ ಕ್ಷಣಾರ್ಧದಲ್ಲಿ ಕೇಂದ್ರದತ್ತ ಏಕಾಏಕಿ ಕುಸಿದು ಕುಗ್ಗಿಬಿಡುತ್ತದೆ. ಹಿಮಾಲಯದ ಇಡೀ ದ್ರವ್ಯವನ್ನು ಒಂದೇ ಒಂದು ಮರಳಿನ ಕಣದ ಗಾತ್ರಕ್ಕೆ ಕುಗ್ಗಿಸಿದಂತೆ ಅಥವಾ ನಮ್ಮ ಇಡೀ ಭೂಮಿಯನ್ನು ಒಂದು ಟೆನಿಸ್ ಚೆಂಡಿನ ಗಾತ್ರಕ್ಕೆ ಅಥವಾ ನಮ್ಮ ಸೂರ್ಯನನ್ನು ಒಂದು ಕಾಲ್ಚೆಂಡಿನ ಗಾತ್ರಕ್ಕೆ ಕುಗ್ಗಿಸಿದಂತಾಗುವ ಆ ಕುಬ್ಜ ಅವಶೇಷದ ದ್ರವ್ಯರಾಶಿ ಹತ್ತು ಸೂರ್ಯರ ದ್ರವ್ಯರಾಶಿಗೆ ಸಮನಾಗುವಂತಿದ್ದು, ಅದರ ಸಾಂದ್ರತೆ ಪ್ರತಿ ಘನ ಸೆಂಟಿಮೀಟರ್ಗೂ ನೂರಾರು ಶತಕೋಟಿ ಟನ್​​​ಗಳನ್ನೂ ಮೀರುವಂತಿದ್ದು, ಕಲ್ಪನಾತೀತ ಗುರುತ್ವವನ್ನೂ ಪಡೆದಿರುತ್ತದೆ.

Last Updated : Oct 6, 2020, 9:18 PM IST

ABOUT THE AUTHOR

...view details