ಬೀಜಿಂಗ್ (ಚೀನಾ):ಲಡಾಖ್ನ ಗಾಲ್ವಾನ್ ವ್ಯಾಲಿ ಪ್ರದೇಶದಲ್ಲಿ ಕೆಲ ದಿನಗಳ ಭಾರತ-ಚೀನಾ ನಡುವೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ 22 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಡೆದ ಬಳಿಕ ಉಭಯ ದೇಶಗಳ ನಡುವೆ ಅನೇಕ ಸಲ ದ್ವಿಪಕ್ಷೀಯ ಹಾಗೂ ಮಿಲಿಟರಿ ಮಟ್ಟದ ಮಾತುಕತೆಗಳು ನಡೆದಿವೆ. ಈ ಬೆಳವಣಿಗೆಗಳ ಬೆನ್ನಲ್ಲೇ ಇವತ್ತು ಪ್ರಧಾನಿ ನರೇಂದ್ರ ಮೋದಿ ಲಡಾಖ್ನ ಲೇಹ್ಗೆ ಭೇಟಿ ನೀಡಿ ಯೋಧರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಗಡಿಯಲ್ಲಿ ಪರಿಸ್ಥಿತಿ ಉಲ್ಬಣಗೊಳಿಸುವ ಪ್ರಯತ್ನ ಬೇಡ: ಮೋದಿ ಲಡಾಖ್ ಭೇಟಿಗೆ ಚೀನಾ ಅಪಸ್ವರ - ಜೋ ಲಿಜಿಯಾನ್
ಗಾಲ್ವಾನ್ ವ್ಯಾಲಿ ಪ್ರದೇಶದಲ್ಲಿ ಪುಂಡಾಟ ಮೆರೆದಿದ್ದ ಚೀನಾಗೆ ಇವತ್ತು ಪ್ರಧಾನಿ ನರೇಂದ್ರ ಮೋದಿ ನೇರವಾಗಿ ತಿರುಗೇಟು ನೀಡಿದ್ದಾರೆ. ಇದಕ್ಕೆ ಚೀನಾ ಪ್ರತಿಕ್ರಿಯೆ ನೀಡಿದೆ.
ಮೋದಿ ಲಡಾಖ್ಗೆ ಭೇಟಿ ನೀಡುತ್ತಿದ್ದಂತೆ ಚೀನಾ ಎಚ್ಚೆತ್ತುಕೊಂಡಿದೆ. ಗಡಿ ಉದ್ವಿಗ್ನತೆ ಪ್ರಯತ್ನದಲ್ಲಿ ಯಾವುದೇ ಸೇನೆ ಭಾಗಿಯಾಗಬಾರದು. ಉಭಯ ದೇಶಗಳ ನಡುವೆ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಈ ವೇಳೆ ಯಾರೂ ಕೂಡ ಪರಿಸ್ಥಿತಿ ಉಲ್ಬಣಗೊಳಿಸುವ ಕೆಲಸ ಮಾಡಬಾರದು ಎಂದಿದೆ.
ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜೋ ಲಿಜಿಯಾನ್ ಈ ಬಗ್ಗೆ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಗಡಿ ಉದ್ವಿಗ್ನತೆ ಪ್ರಯತ್ನ ಬೇಡ. ಭಾರತದೊಂದಿಗೆ ಶಾಂತಿಯುತ ಮಾತುಕತೆ ಮುಂದುವರೆದಿದೆ. ಎರಡೂ ಸೇನೆಗಳಿಂದ ಆಕ್ರಮಣಕಾರಿ ವರ್ತನೆ ಸರಿಯಲ್ಲ ಎಂದಿದ್ದು, ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.