ನವದೆಹಲಿ :ದೀರ್ಘಾವಧಿಯ ಲಾಕ್‌ಡೌನ್ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ. ದೇಶದಲ್ಲಿ ಸಾಕಷ್ಟು ಆಹಾರ, ಔಷಧಿಗಳು ಹಾಗೂ ಇತರ ಅಗತ್ಯ ವಸ್ತುಗಳ ಬೇಕಾದಷ್ಟು ಸಂಗ್ರಹವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಗೃಹ ಸಚಿವರು, ತಮ್ಮ ನರೆಹೊರೆಯ ಬಡವರು ಹಾಗೂ ನಿರ್ಗತಿಕರಿಗೆ ಶ್ರೀಮಂತ ಜನರು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
"ದೇಶದ ಗೃಹ ಸಚಿವನಾಗಿ, ದೇಶದಲ್ಲಿ ಸಾಕಷ್ಟು ಆಹಾರ, ಔಷಧಿಗಳು ಮತ್ತು ಇತರ ಸರಕುಗಳ ಸಂಗ್ರಹವಿದೆ ಎಂದು ನಾನು ಮತ್ತೆ ಸಾರ್ವಜನಿಕರಿಗೆ ಭರವಸೆ ನೀಡುತ್ತೇನೆ. ಯಾರೂ ಅದರ ಬಗ್ಗೆ ಚಿಂತಿಸಬಾರದು" ಎಂದು ಹೇಳಿದ್ದಾರೆ.
ಇದೇ ವೇಳೆ ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಶ್ಲಾಘಿಸಿದ ಶಾ, ಎಲ್ಲಾ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುತ್ತಿರುವ ರೀತಿ ನಿಜಕ್ಕೂ ಪ್ರಶಂಸನೀಯ ಎಂದು ರಾಜ್ಯಗಳ ಬೆನ್ನುತಟ್ಟಿದ್ದಾರೆ.
ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಮತ್ತು ಎಲ್ಲಾ ಭದ್ರತಾ ಸಿಬ್ಬಂದಿ ಕೊಡುಗೆ ಅಮೂಲ್ಯ. ಇಂತಹ ಸಂದಿಗ್ಧ ಸನ್ನಿವೇಶದಲ್ಲೂ ನಿಮ್ಮ ಧೈರ್ಯ ಹಾಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ರೀತಿ ಎಲ್ಲಾ ಭಾರತೀಯರಿಗೂ ಸ್ಫೂರ್ತಿ. ಹೀಗಾಗಿ ಎಲ್ಲಾ ನಾಗರಿಕರು ಅವರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.