ನೂಹ್ (ಹರಿಯಾಣ): ಕೊರೊನಾದಿಂದಾಗಿ ಶಾಲೆಗಳು ಸ್ತಬ್ಧವಾಗಿವೆ. ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಈ ಕೊರೊನಾ ಮಹಾಮಾರಿ ದುಷ್ಪರಿಣಾಮ ಬೀರಿದ್ದು, ಹರಿಯಾಣ ರಾಜ್ಯದ ನೂಹ್ ಜಿಲ್ಲೆಯ ಶಿಕ್ಷಣ ಮತ್ತಷ್ಟು ಕುಸಿದಿದೆ.
ಕೊರೊನಾ ವೈರಸ್ ಇಡೀ ವಿಶ್ವವನ್ನೇ ಬದಲಾಯಿಸಿಬಿಟ್ಟಿದೆ. ಶ್ರೀಮಂತ, ಬಡವ ಅನ್ನೋ ತಾರತಮ್ಯ ಇಲ್ಲದೇ ಎಲ್ಲರಿಗೂ ಸಂಕಷ್ಟ ತಂದೊಡ್ಡಿದ್ದು, ಯಾರನ್ನೂ ಬಿಟ್ಟಿಲ್ಲ. ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೊಂದಾಗಿರುವ ನೂಹ್ನಲ್ಲಿ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ.
ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳಿಗೆ ಓದಲು ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿ ಆನ್ಲೈನ್ ಶಿಕ್ಷಣ ಶೂನ್ಯವಾಗಿದೆ. ಇಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಶಾಲೆಗಳು ತೆರೆಯಬೇಕು ಹಾಗೂ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಂಡು ಅಭ್ಯಾಸ ಮಾಡಬೇಕು ಎಂಬುದು ಪೋಷಕರ ಆಗ್ರಹವಾಗಿದೆ.
ಮಕ್ಕಳಿಗೆ ಕೊರೊನಾ ಬರಬಾರದು ಎಂಬ ಕಾರಣಕ್ಕೆ ಲಾಕ್ಡೌನ್ ಮಾಡಲಾಗಿದೆ. ಅದರ ಜೊತೆಗೆ ಆನ್ಲೈನ್ ಬೋಧನೆಗೆ ಸಿದ್ಧತೆ ನಡೆಸಲಾಗುತ್ತಿದೆ. ಆದ್ರೆ ನೂಹ್ ಜಿಲ್ಲೆಯಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳಲ್ಲಿ ಫೋನ್ ಇದ್ದು, ಆನ್ಲೈನ್ ಶಿಕ್ಷಣದ ಸೌಲಭ್ಯ ಪಡೆಯುತ್ತಿರುವವರ ಸಂಖ್ಯೆ ಕಡಿಮೆಯಿದೆ.
ಜಿಲ್ಲಾಡಳಿತ ಆನ್ಲೈನ್ ಶಿಕ್ಷಣಕ್ಕಾಗಿ ಎಜುಸ್ಯಾಟ್ ತರಹದ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರ ಜೊತೆಗೆ ಕೇಬಲ್ ನೆಟ್ವರ್ಕ್, ವಾಟ್ಸ್ಆ್ಯಪ್ ಮೂಲಕವೂ ಪಾಠ ಪ್ರವಚನಗಳು ನಡೆಯುತ್ತಿವೆ. ಜಿಲ್ಲಾ ಶಿಕ್ಷಣ ಮಂಡಳಿಯ ಪ್ರಕಾರ ಶೇಕಡಾ 61ರಷ್ಟು ಮಂದಿ ಆನ್ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ.
ಹಿಂದುಳಿದ ಪ್ರದೇಶಗಳಲ್ಲಿ ಟಿವಿಗಳು ಕಡಿಮೆ ಪ್ರಮಾಣದಲ್ಲಿವೆ. ಟಿವಿಯ ಮೂಲಕ ಶೇಕಡಾ 27ರಷ್ಟು ಮಂದಿ ಪಾಠಗಳನ್ನು ಕೇಳುತ್ತಿದ್ದಾರೆ. ಶೇಕಡಾ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈಟಿವಿ ಭಾರತ ತಂಡ ಪ್ರತ್ಯಕ್ಷ ವರದಿಗಾಗಿ ತೆರಳಿದ್ದಾಗ ನೂಹ್ ಜಿಲ್ಲೆಯ ಜನರ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಟಿವಿ ಕೊಳ್ಳೋಕೆ ಕೂಡಾ ಆಗದ ಪರಿಸ್ಥಿತಿ ಅವರಲ್ಲಿದೆ. ಆಂಡ್ರಾಯ್ಡ್ ಫೋನ್ಗಳಿರಲಿ.. ಮಾಮೂಲಿ ಬೇಸಿಕ್ ಮೊಬೈಲ್ ಫೋನ್ಗಳಿಗೂ ಅಲ್ಲಿ ಕೊರತೆಯಿದೆ ಎಂದು ತಿಳಿದು ಬಂದಿದ್ದು, ಶಿಕ್ಷಣ ವಂಚಿತರ ನೆರವಿಗೆ ಸರ್ಕಾರ ಧಾವಿಸಬೇಕಿದೆ.