ಸೋನಭದ್ರ(ಉತ್ತರಪ್ರದೇಶ):ಮಹತ್ವದ ಶೋಧವೊಂದರಲ್ಲಿ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ 12 ಲಕ್ಷ ಕೋಟಿ ರೂ. ಮೌಲ್ಯಕ್ಕೂ ಹೆಚ್ಚಿನ ಪ್ರಮಾಣದ 3 ಸಾವಿರ ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಇದು ಪ್ರಸ್ತುತ ಭಾರತದ ಚಿನ್ನದ ಮೀಸಲು ಪ್ರಮಾಣಕ್ಕಿಂತ 5 ಪಟ್ಟು ಹೆಚ್ಚಳ ಎಂಬ ಮಹತ್ವದ ಸಂಗತಿ ಬಹಿರಂಗವಾಗಿತ್ತು. ಈ ಮಾಹಿತಿ ಬಹಿರಂಗದ ಬೆನ್ನಲ್ಲೆ ಇದೀಗ ಶಾಕಿಂಗ್ ನ್ಯೂಸ್ ಸಹ ಹೊರಬಿದ್ದಿದೆ.
ಯುಪಿಯಲ್ಲಿ ಬಂಗಾರದ ನಿಕ್ಷೇಪ: ಭಾರತದ ಒಟ್ಟು ಸಂಗ್ರಹಕ್ಕಿಂತ 5 ಪಟ್ಟು ಹೆಚ್ಚು ಚಿನ್ನ ಪತ್ತೆ..
ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಭೂ ವಿಜ್ಞಾನ ಇಲಾಖೆ ಮಾಹಿತಿ ನೀಡಿದ್ದು, ಅಲ್ಲಿ ಅಂತಹ ಯಾವುದೇ ಅಂಕಿ-ಅಂಶಗಳ ಮಾಹಿತಿ ನೀಡುವ ಚಿನ್ನ ಲಭ್ಯವಾಗಿಲ್ಲ ಎಂದಿದೆ. ಭಾರಿ ಪ್ರಮಾಣದ ನಿಕ್ಷೇಪ ಇರುವ ಬಗ್ಗೆ ಆಗಿರುವ ವರದಿ ಸಂಬಂಧ ಮಾತನಾಡಿರುವ ಭೂ ವಿಜ್ಞಾನ ಇಲಾಖೆ ಮಹಾ ನಿರ್ದೇಶಕ ಎಂ. ಶ್ರೀಧರ್, ಅಲ್ಲಿ ಚಿನ್ನದ ಅದಿರು ಇದೆಯೇ ಎಂಬುದರ ಕುರಿತಾಗಿ ನಾವು ನಡೆಸಿದ್ದ ಅಧ್ಯಯನದ ವರದಿಯನ್ನ ಸರ್ಕಾರಕ್ಕೆ ನೀಡಿದ್ದೇವೆ. ಆದರೆ ಇಷ್ಟೇ ಪ್ರಮಾಣದ ಚಿನ್ನದ ನಿಕ್ಷೇಪ ಇದೆ ಎಂಬುದರ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಇದು ಮಾಧ್ಯಮಗಳಿಂದ ಬಿತ್ತರಗೊಳ್ಳುತ್ತಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭೂ ವಿಜ್ಞಾನ ಇಲಾಖೆ ವರದಿ ಪ್ರಕಾರ ಈ ಪ್ರದೇಶದಲ್ಲಿ ಕೇವಲ 160 ಕೆ.ಜಿ ಬಂಗಾರ ಇರುವ ಬಗ್ಗೆ ವರದಿ ಮಾಡಿದ್ದೇವೆ. 3350 ಕೆ ಜಿ ಬಂಗಾರ ಅಲ್ಲ ಎಂಬುದಾಗಿ ಶ್ರೀಧರ್ ಹೇಳಿದ್ದಾರೆ.
1998-1999ರ ಅವಧಿಯಲ್ಲಿ ನಾವು ಇಲ್ಲಿ ಅಧ್ಯಯನ ನಡೆಸಿದ್ದೇವು. ಇದೀಗ ಈ ಮಾಹಿತಿ ನೀಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇವೆ. ಆದರೆ ಅಲ್ಲಿ ನಡೆಸಿರುವ ಅಧ್ಯಯನ ನಮಗೆ ಸಮಾಧಾನ ನೀಡಿಲ್ಲ. ಸುಮಾರು 170 ಮೀಟರ ಆಳದಲ್ಲಿ ಚಿನ್ನದ ನಿಕ್ಷೇಪ ಹರಿಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
52806 ಟನ್ ಅದಿರು ಈ ಭಾಗದಲ್ಲಿದ್ದು, ಇದನ್ನೆಲ್ಲ ಶುದ್ಧೀಕರಿಸಿದರೆ, ಪ್ರತಿ ಟನ್ ಅದಿರಿಗೆ 3.3 ಗ್ರಾಂ ಚಿನ್ನ ದೊರೆಯಬಹುದು ಎಂದು ಭೂ ವಿಜ್ಞಾನ ಇಲಾಖೆ ಅಂದಾಜಿಸಿದೆ. ಆದರೆ ಪತ್ರಿಕೆಗಳು ಹಾಗೂ ಇನ್ನುಳಿದ ಮಾಧ್ಯಮಗಳಲ್ಲಿ ವರದಿ ಆಗಿರುವಂತೆ 3350 ಟನ್ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.