ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ 'ಅಜಾನ್' ನಿಷೇಧಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಜನರು ಮನೆಯಲ್ಲೇ ಇದ್ದು ಲಾಕ್‌ಡೌನ್ ನಿಯಮ ಪಾಲಿಸಿ ಮನವಿ ಮಾಡಿದ್ದಾರೆ.
ಅಜಾನ್ ನಿಷೇಧಿಸಲಾಗಿದೆ ಎಂದು ಇಬ್ಬರು ಪೊಲೀಸರು ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಬೈಜಾಲ್ ಸ್ಪಷ್ಟನೆ ನಿಡಿದ್ದಾರೆ.
ಅಜಾನ್ ಅನ್ನು ನಿಷೇಧಿಸಲಾಗಿದೆ ಎಂದು ಇಬ್ಬರು ಪೊಲಿಸರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂತಹ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ದೆಹಲಿ ಪೊಲೀಸರು ಈಗಾಗಲೇ ತಿಳಿಸಿದ್ದಾರೆ ಎಂದು ಬೈಜಾಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕರ ಹಿತಾಸಕ್ತಿಗಾಗಿ ಲಾಕ್‌ಡೌನ್ ನಿಯಮ ಪಾಲಿಸುವ ಮೂಲಕ ಪವಿತ್ರ ರಂಜಾನ್ ತಿಂಗಳನ್ನು ಆಚರಿಸಲು ಮನವಿ ಮಾಡುತ್ತೇನೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಟ್ವೀಟ್ನಲ್ಲಿ ಅವರು ತಿಳಿಸಿದ್ದಾರೆ.
ಅಜಾನ್ಗೆ ಯಾವುದೇ ನಿರ್ಬಂಧವಿಲ್ಲ. ಲಾಕ್‌ಡೌನ್ ಸಮಯದಲ್ಲಿ ಮಸೀದಿ ಅಥವಾ ಇನ್ನಾವುದೇ ಧಾರ್ಮಿಕ ಸ್ಥಳದಲ್ಲಿ ಪ್ರಾರ್ಥನೆಗಾಗಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಗೃಹ ಸಚಿವ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.