ದೆಹಲಿ:ನಿತೀಶ್ ಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಎನ್ಡಿಎಗೆ ಮೂರನೇ ಎರಡರಷ್ಟು ಸ್ಥಾನಗಳು ದೊರೆಯಲಿವೆ ಎಂದು ಅಮಿತ್ ಶಾ ಹೇಳಿದ್ದಾರೆ. "ಇಲ್ಲದಿದ್ದರೆ ಅಥವಾ ಇಲ್ಲ ಎಂಬ ಮಾತೇ ಇಲ್ಲ. ನಿತೀಶ್ ಕುಮಾರ್ ಮುಂದಿನ ಬಿಹಾರ್ ಮುಖ್ಯಮಂತ್ರಿಯಾಗಲಿದ್ದಾರೆ. ನಾವು ಸಾರ್ವಜನಿಕ ಘೋಷಣೆ ಮಾಡಿದ್ದೇವೆ ಮತ್ತು ಅದಕ್ಕೆ ನಾವು ಬದ್ಧರಾಗಿದ್ದೇವೆ" ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಹಕ್ಕು ಸಾಧಿಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಈ ರೀತಿಯ ಉತ್ತರ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಬಿಹಾರದ ಜನರಿಗೆ 'ಡಬಲ್ ಎಂಜಿನ್' ಸರ್ಕಾರ ಸಿಗಲಿದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್, ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಎಲ್ಜೆಪಿ ಬಗ್ಗೆ ಕೇಳಿದ ಪ್ರಶ್ನೆಗೆ "ಇದು ಅವರ (ಎಲ್ಜೆಪಿ) ನಿರ್ಧಾರ, ನಮ್ಮದಲ್ಲ" ಸ್ಪಷ್ಟಪಡಿಸಿದರು. 243 ಸ್ಥಾನಗಳ ಬಿಹಾರ ವಿಧಾನಸಭೆಗೆ ಅಕ್ಟೋಬರ್ 28, ನವೆಂಬರ್ 3 ಮತ್ತು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ನವೆಂಬರ್ 10 ರಂದು ನಡೆಯಲಿದೆ ಎಂದರು.