ನವದೆಹಲಿ: ರಷ್ಯಾ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಸ್ (ಎಫ್‌ಎಂಸಿಬಿಜಿ) ಮೊದಲ ಬ್ರಿಕ್ಸ್ ಸಭೆಯಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದರು.
ಅಧಿಕೃತ ಮಾಹಿತಿಯ ಪ್ರಕಾರ, ಸೌದಿ ಅಧ್ಯಕ್ಷತೆಯ ಜಿ20 ಸಭೆಯ ಫಲಿತಾಂಶಗಳು, ಮೂಲಸೌಕರ್ಯ ಹೂಡಿಕೆಗಳನ್ನು ಉತ್ತೇಜಿಸುವ ಡಿಜಿಟಲ್ ವೇದಿಕೆ ಮತ್ತು ಹೊಸ ಅಭಿವೃದ್ಧಿ ಬ್ಯಾಂಕಿನ ಸದಸ್ಯತ್ವವನ್ನು ವಿಸ್ತರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಜಿ20ಯ ಎಲ್ಲಾ ಸದಸ್ಯ ರಾಷ್ಟ್ರಗಳು ಕೋವಿಡ್ ನಿಯಂತ್ರಿಸಲು ಸೂಕ್ತ ಸಲಹೆಗಳನ್ನು ನೀಡಿದೆ. ಸಾಮೂಹಿಕವಾಗಿ ಕೋವಿಡ್ ಬಿಕ್ಕಟ್ಟು ಎದುರಿಸುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ಕಡಿಮೆ ಆದಾಯದ ದೇಶಗಳಿಗೆ ನೆರವಾಗಲು ಜಿ20 ರಾಷ್ಟ್ರಗಳಿಂದ ನೆರವಿನ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
ಆರ್ಥಿಕತೆಯ ಬಗ್ಗೆ ಇರುವ ಕಳವಳಗಳು, ಡಿಜಿಟಲ್ ಆರ್ಥಿಕತೆಯ ತೆರಿಗೆಗೆ ಪರಿಹಾರ ಕಂಡುಹಿಡಿಯಲು ನಡೆಯುತ್ತಿರುವ ಅಂತಾರಾಷ್ಟ್ರೀಯ ಪ್ರಯತ್ನಗಳು, ಈಕ್ವಿಟಿ ಮತ್ತು ತೆರಿಗೆ ವ್ಯವಸ್ಥೆಗಳ ಸುಸ್ಥಿರತೆಯನ್ನು ಖಾತರಿಪಡಿಸುವಲ್ಲಿ ಒಮ್ಮತದ ಪರಿಹಾರದ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.