ನವದೆಹಲಿ:ದೇಶದ ಒಟ್ಟಾರೆ ಸಂಶೋಧನಾ ಪರಿಸರ ವ್ಯವಸ್ಥೆಗೆ ಪುಷ್ಠಿ ನೀಡಲು, ದೇಶದಲ್ಲಿ ಆವಿಷ್ಕಾರ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು, ಆರ್ಥಿಕ ವರ್ಷ 2021-22ರ ಕೇಂದ್ರ ಬಜೆಟ್ ಹೊಸ ಉಪಕ್ರಮಗಳನ್ನು ಘೋಷಿಸಿದೆ.
ಇಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸುವಾಗ, ಡಿಜಿಟಲ್ ಪಾವತಿ, ಬಾಹ್ಯಾಕಾಶ ವಲಯ ಮತ್ತು ಸಾಗರದಾಳದ ಪರಿಶೋಧನೆಗಳನ್ನು ಒಳಗೊಂಡಿರುವ ಪ್ರಸ್ತಾವಿತ ಉಪಕ್ರಮಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ರಾಷ್ಟ್ರೀಯ ಸಂಶೋಧನಾ ಸಂಸ್ಥೆ:ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಾಗಿ ಮುಂಬರುವ 5 ವರ್ಷಗಳಲ್ಲಿ 50 ಸಾವಿರ ಕೋಟಿ ಅನುದಾನ ನೀಡಿದ್ದು, ರಾಷ್ಟ್ರೀಯ-ಆದ್ಯತೆಗಾಗಿ ಒತ್ತು ನೀಡಬೇಕೆಂದು ಗುರುತಿಸಲಾದ ಪ್ರದೇಶಗಳ ಮೇಲೆ ಗಮನಹರಿಸಲಾಗಿದೆ ಮತ್ತು ದೇಶದ ಒಟ್ಟಾರೆ ಸಂಶೋಧನಾ ಪರಿಸರ ವ್ಯವಸ್ಥೆಗೆ ಪುಷ್ಠಿ ನೀಡಲಾಗಿದೆ ಎಂದಿದ್ದಾರೆ.
ಡಿಜಿಟಲ್ ಪಾವತಿಗಳಿಗೆ ಉತ್ತೇಜನ :ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಮತ್ತು ಈ ಚಲನಗತಿಯನ್ನು ಮುಂದುವರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. ಡಿಜಿಟಲ್ ಪಾವತಿ ಪದ್ಧತಿಗಳಿಗೆ ಪ್ರೋತ್ಸಾಹ ನೀಡಲು ಮತ್ತು ಡಿಜಿಟಲ್ ವಹಿವಾಟುಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಆರ್ಥಿಕ ಪ್ರೋತ್ಸಾಹನೀಡುವ 1,500 ಕೋಟಿ ರೂ.ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.