ನವದೆಹಲಿ:ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅಂತ್ಯ ಕಂಡಿದೆ. ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಆದರೆ ಮಹಿಳೆಯರ ಸುರಕ್ಷತೆಗಾಗಿ ನಿರ್ಭಯಾ ಹೆಸರಿನಲ್ಲಿ ಸ್ಥಾಪಿಸಲಾದ ನಿಧಿ ಮಾತ್ರ ಇನ್ನೂ ಸರಿಯಾಗಿ ಬಳಕೆಯಾಗದೇ ಉಳಿದಿದೆ.
2013ರಲ್ಲಿ ಯುಪಿಎ ಸರ್ಕಾರ ಸ್ಥಾಪಿಸಿ ರಾಜ್ಯಗಳಿಗೆ ಹಂಚಿದ್ದ ನಿರ್ಭಯಾ ನಿಧಿಯಲ್ಲಿ ಶೇ 25ಕ್ಕೂ ಕಡಿಮೆ ಬಳಕೆಯಾಗಿದೆ ಎಂದು ತಿಳಿದುಬಂದಿದೆ. ಉತ್ತರಾಖಂಡ್ ಹಾಗೂ ಮಿಜೋರಾಂ ಸರ್ಕಾರಗಳು ತಮಗೆ ಹಂಚಿಕೆ ಮಾಡಿದ್ದ ಅನುದಾನದಲ್ಲಿ ಹೆಚ್ಚಿನ ಪಾಲು ಬಳಸಿಕೊಂಡಿವೆ.
ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಸುದ್ದಿಯಲ್ಲಿರುವ ಉತ್ತರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ದೆಹಲಿ ಅತಿ ಹೆಚ್ಚು 'ನಿರ್ಭಯ ನಿಧಿ'ಯನ್ನು ಪಡೆದ ಪಟ್ಟಿಯಲ್ಲಿವೆ. ಆದರೆ ತನಗೆ ನೀಡಿದ್ದ 191 ಕೋಟಿ ರೂಪಾಯಿಯಲ್ಲಿ ಶೇ 7ರಷ್ಟು ಅಂದರೆ 13.62 ಕೋಟಿ ರೂಪಾಯಿಯನ್ನು ಮಾತ್ರ ಕರ್ನಾಟಕ ಬಳಸಿದೆ.
ದೆಹಲಿಗೆ ನೀಡಿದ್ದ 390 ಕೋಟಿ ರೂಪಾಯಿಯಲ್ಲಿ 19.41 ಕೋಟಿ ರೂಪಾಯಿಯನ್ನು ಬಳಸಿಕೊಂಡಿದೆ. ತೆಲಂಗಾಣಕ್ಕೆ 103 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ ಬಳಸಿಕೊಂಡಿದ್ದು 4 ಕೋಟಿ ರೂಪಾಯಿ. ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ 13 ಕಾರ್ಯಕ್ರಮಗಳಿಗೂ ತೆಲಂಗಾಣ ಸರ್ಕಾರ ನಿರ್ಭಯಾ ನಿಧಿಯಿಂದ ಹಣ ಪಡೆದುಕೊಂಡಿದೆ. ತನಗೆ ಹಂಚಿಕೆಯಾದ ಹಣದಲ್ಲಿ ಶೇ 5ರಷ್ಟು ಹಣವನ್ನು ಮಾತ್ರ ಪಶ್ಚಿಮ ಬಂಗಾಳ ಬಳಸಿಕೊಂಡಿದೆ.ತಮಿಳುನಾಡಿಗೆ ನಿಗದಿಪಡಿಸಿದ್ದ 190.68 ಕೋಟಿ ರೂಪಾಯಿಯಲ್ಲಿ ಆರು ಕೋಟಿ ರೂಪಾಯಿಯನ್ನು ಮಾತ್ರ ಬಳಸಲಾಗಿದೆ.