ನವದೆಹಲಿ: ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಅನಿವಾರ್ಯ. ಹೀಗಾಗಿ ಈ ಸೋಷಿಯಲ್ ಡಿಸ್ಟೆನ್ಸಿಂಗ್ಅನ್ನು ಖಚಿತಪಡಿಸಿಕೊಳ್ಳಲು ದೆಹಲಿಯ ಐದನೇ ತರಗತಿಯ ವಿದ್ಯಾರ್ಥಿಯೊಬ್ಬ ಹೊಸ ಸಾಧನವನ್ನು ಅಭಿವೃದ್ಧಿಪಡಿಸಿದ್ದಾನೆ. ಒಂದು ವೇಳೆ ಸಾಮಾಜಿಕ ಅಂತರ ಮರೆತರೆ ಇದು ನಿಮ್ಮನ್ನು ಕೂಡಲೇ ಎಚ್ಚರಿಸುತ್ತೆ.
ದೆಹಲಿಯ ಶಾಲಿಮಾರ್ ಬಾಗ್ ನಿವಾಸಿಯಾದ ಹಿಟೆನ್, 5ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈತನ ವಯಸ್ಸು ಕೇವಲ 9. ಬಾಲಕ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಅಲ್ಟ್ರಾಸಾನಿಕ್ ಸೆನ್ಸಾರ್ಗಳನ್ನು ಅಳವಡಿಸಲಾಗಿದೆ. ಸಾಮಾಜಿಕ ಅಂತರ ಮರೆತು ಎರಡು ಅಡಿ ಅಂತರ ಕಾಪಾಡದಿದ್ದರೆ ಧ್ವನಿ ಮತ್ತು ಎಲ್ಇಡಿ ಬೆಳಕಿನಿಂದ ಇದು ಬಳಕೆದಾರರನ್ನು ಎಚ್ಚರಿಸುತ್ತದೆ.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಹಿಟೆನ್, ಎಲ್ಇಡಿ ಬೆಳಕಿನೊಂದಿಗೆ ಅಲಾರಂ ರಿಂಗಣಿಸಿದಾಗ ಬಳಕೆದಾರರು ಎಚ್ಚರಗೊಳ್ಳುತ್ತಾರೆ. ನನ್ನ ಶಾಲೆಯ ಫೇಸ್‌ಬುಕ್ ಪೇಜ್ನಲ್ಲಿ, ಸಾಮಾಜಿಕ ಅಂತರ ಕಾಪಾಡಲು ಒಂದು ಸಾಧನ ಇರಬೇಕೆಂದು ಉಲ್ಲೇಖಿಸಲಾಗಿತ್ತು. ಅದನ್ನು ನೋಡಿದ ಬಳಿಕ ಈ ಡಿವೈಸ್ ತಯಾರಿಸುವ ಆಲೋಚನೆ ಬಂತು ಎಂದು ಹೇಳಿದ್ದಾನೆ.