ಮುಂಬೈ:ನಗರದ ನಿಗದಿತ ಪ್ರದೇಶಗಳಲ್ಲಿ ಮಾತ್ರ ದಿನದ 24 ಗಂಟೆಯೂ ಬಾರ್ ಮತ್ತು ಮಾಲ್ಗಳನ್ನು ತೆರೆಯಲು ಸೂಚಿಸಲಾಗುವುದು ಮತ್ತು ಅದಕ್ಕೆ ಇಟ್ಟಿರುವ 'ರಾತ್ರಿ ಜೀವನ'(ನೈಟ್ ಲೈಫ್) (ಮುಂಬೈ 24x7 ಸೇವೆ) ಎಂಬ ಹೆಸರು ಬದಲಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ಅಶೋಕ್ ಚವ್ಹಾಣ್ ಹೇಳಿದರು.
'ಮುಂಬೈ 24x7 ಸೇವೆ' ಪ್ರಸ್ತಾಪಕ್ಕೆ ಇಂದು ಸಚಿವ ಸಂಪುಟದಲ್ಲಿ ಅಂಗೀಕಾರ ಸಿಕ್ಕಿದೆ. ಜ.27ರಿಂದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ನಾರಿಮನ್ ವಸತಿ ರಹಿತ ಪ್ರದೇಶಗಳಲ್ಲಿರುವ ಮಾಲ್, ಮಲ್ಟಿಪ್ಲೆಕ್ಸ್, ಅಂಗಡಿಗಳು ಸೇವೆಗೆ ಮುಕ್ತವಾಗಿರುತ್ತವೆ ಎಂದು ಸಚಿವ ಆದಿತ್ಯ ಠಾಕ್ರೆ ಹೇಳಿದ್ದರು.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅಶೋಕ್ ಚವ್ಹಾಣ್ ಇಂದು ನಡೆದ ಸಚಿವ ಸಂಪುಟದಲ್ಲಿ 'ಮುಂಬೈ 24x7 ಸೇವೆ'ಗೆ ಒಪ್ಪಿಗೆ ಸಿಕ್ಕಿದೆ. ಆದರೆ, ಈ ಹೆಸರು ಸೂಕ್ತವಾದದ್ದು ಅಲ್ಲ. ಇದರ ಬಗ್ಗೆ ಚರ್ಚಿಸಿ ಸರಿಯಾದ ಹೆಸರನ್ನು ಇಡುತ್ತೇವೆ. ಅಲ್ಲದೆ, ನಗರದ ಎಲ್ಲ ಪ್ರದೇಶಗಳಲ್ಲೂ ಮಾಲ್ ಮತ್ತು ಬಾರ್ಗಳನ್ನು ದಿನದ 24 ಗಂಟೆಯೂ ತೆರೆಯಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಯೋಜನೆಯ ಅನುಷ್ಠಾನದ ದಿನ ನಿಗದಿಯಾಗಿಲ್ಲ. ಸೂಕ್ಷ್ಮ, ಅತೀ ಸೂಕ್ಷ್ಮ, ಸುರಕ್ಷಿತ ಸ್ಥಳಗಳನ್ನು ಗುರುತಿಸಿ ಅಲ್ಲಿ ಮಾತ್ರ 24 ಗಂಟೆಯೂ ಮಾಲ್ ಮತ್ತು ಬಾರ್ಗಳನ್ನು ತೆರೆಯುಲು ಅನುಮತಿ ನೀಡುತ್ತೇವೆ. ಅಲ್ಲದೆ, ಆ ಪ್ರದೇಶಗಳಲ್ಲಿ ಪೋಲಿಸ್ ವ್ಯವಸ್ಥೆ ಹೇಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇವೆ. ಇನ್ನೂ ಹೆಚ್ಚಿನ ಪೊಲೀಸ್ ವ್ಯವಸ್ಥೆಯನ್ನು ಒದಗಿಸಬೇಕೇ ಬೇಡವೇ ಎಂಬುದನ್ನು ಚರ್ಚಿಸುತ್ತೇವೆ ಎಂದು ಹೇಳಿದರು.