ಜೈಪುರ :ಕೇರಳದ ಕೊಚ್ಚಿನ್ ಶಿಫ್ಯಾರ್ಡ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್ನಿಂದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಮುಂಗರ್ ಜಿಲ್ಲೆಯ ಸುಮಿತ್ ಕುಮಾರ್ ಸಿಂಗ್ ( 23) ಮತ್ತು ರಾಜಸ್ಥಾನದ ಹನುಮಘರ್ ನಿವಾಸಿ ದಯಾರಾಮ್ (22) ಬಂಧಿತ ಆರೋಪಿಗಳು. ಇವರು 2019 ಸೆಪ್ಪೆಂಬರ್ ತಿಂಗಳಲ್ಲಿ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ನಿಂದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಕಳವು ಮಾಡಿದ್ದರು. ಈ ಕುರಿತು ಎರ್ನಾಕುಲಂನಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದರಿಂದ ತನಿಖೆಯ ಉಸ್ತುವಾರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿತ್ತು. ತನಿಖೆ ವೇಳೆ ನೌಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಸುಮಾರು 5 ಸಾವಿರ ಸಿಬ್ಬಂದಿಯನ್ನ ಎನ್‌ಐಎ ವಿಚಾರಣೆ ನಡೆಸಿತ್ತು ಮತ್ತು ಅವರ ಬೆರಳಚ್ಚು ಪಡೆದಿತ್ತು. ಇದೀಗ ಎಂಟು ತಿಂಗಳ ಬಳಿಕ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಎನ್‌ಐಎ ಯಶಸ್ವಿಯಾಗಿದೆ.