ನವದೆಹಲಿ : ವಿಶಾಖಪಟ್ಟಣದ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆಂಧ್ರಪ್ರದೇಶ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ದುರಂತದಿಂದ ಜನರ ಜೀವಿಸುವ ಹಕ್ಕು ಉಲ್ಲಂಘನೆಯಾಗಿದೆ ಎಂದು ಆಯೋಗ ಇದೇ ವೇಳೆ ಹೇಳಿದೆ.
ಈಗಾಗಲೇ ದೇಶಾದ್ಯಂತ ಕೋವಿಡ್-19 ಭೀತಿಯಿಂದಾಗಿ ಜನರೆಲ್ಲರೂ ಮನೆಯಲ್ಲಿಯೇ ಇರಬೇಕಾದಂತಹ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಇಂತಹದ್ದೊಂದು ದುರಂತ ಸಂಭವಿಸಿದೆ.
ವಿಶಾಖಪಟ್ಟಣಂ ನಲ್ಲಿ ಮುಂಜಾನೆ ಅನಿಲ ಸೋರಿಕೆಯಿಂದಾಗಿ 8 ಜನ ಸಾವನ್ನಪ್ಪಿದ್ದರೆ 5 ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅವುಗಳ ವರದಿ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನ ದಾಖಲಿಸಿಕೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡುತ್ತಿದ್ದೇವೆ ಎಂದು ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ನೋಟಿಸ್ನಲ್ಲಿ ಇರೋದಾದರೂ ಏನು?
ಅನಿಲ ಸೋರಿಕೆಯಿಂದಾಗಿ ಸುಮಾರು 3 ಕಿಲೋಮೀಟರ್ ವ್ಯಾಪ್ತಿಯ ಜನರ ಮೇಲೆ ಪರಿಣಾಮ ಬೀರಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ರಕ್ಷಣಾ ಕಾರ್ಯಾಚರಣೆಯ ಸ್ಥಿತಿ, ಅನಾರೋಗ್ಯ ಪೀಡಿತರ ಚಿಕಿತ್ಸೆ ಮತ್ತು ಪರಿಹಾರ ಮತ್ತು ಸಂತ್ರಸ್ತ ಕುಟುಂಬಗಳಿಗೆ ರಾಜ್ಯದ ಅಧಿಕಾರಿಗಳು ಒದಗಿಸುವ ಪುನರ್ವಸತಿ ಸೇರಿದಂತೆ ವಿವರವಾದ ವರದಿಯನ್ನು ನೀಡುವಂತೆ ಆಯೋಗವು ಆಂಧ್ರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.
ನಿರ್ದಿಷ್ಟ ಕೈಗಾರಿಕಾ ಘಟಕದಲ್ಲಿ ಸರ್ಕಾರ ನಿಗದಿ ಪಡಿಸಿರುವ ಮಾನದಂಡಗಳನ್ನು ಜಾರಿಗೊಳಿಸಲಾಗಿದೆಯೇ ಎಂದು ಪರಿಶೀಲಿಸಿ ಮತ್ತು ಆ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆಯೂ ಆಯೋಗವು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೂ ಸೂಚನೆ ನೀಡಿದೆ.
ಈ ದುರಂತದಿಂದ ಜನರ ಜೀವಿಸುವ ಹಕ್ಕನ್ನು ಕಸಿದುಕೊಂಡಂತಾಗಿದೆ. ಅಷ್ಟೇ ಅಲ್ಲ ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಯೋಗ ಹೇಳಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ನೀಡಿರುವ ನೋಟಿಸ್ಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆಯೋ ಆಯೋಗ ತಾಕೀತು ಮಾಡಿದೆ.