ನವದೆಹಲಿ: ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಇತರ ಇ-ಕಾಮರ್ಸ್ ದೈತ್ಯ ಕಂಪನಿಗಳ ವಿರುದ್ಧ ಪರಿಸರ ಲೆಕ್ಕಪರಿಶೋಧನೆಗೆ ಆದೇಶಿಸಬಹುದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT)ವು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಗೆ ನಿರ್ದೇಶಿಸಿದೆ.
ಕಾನೂನಿನ ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸುವ ನಿಟ್ಟಿನಲ್ಲಿ, ಪರಿಸರದ ಮಾನದಂಡಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಿಬಹುದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷರಾದ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದಲ್ಲಿ, ನ್ಯಾಯಮಂಡಳಿಯ ನ್ಯಾಯಪೀಠವು, ಈ ವಿಷಯದಲ್ಲಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶಿಸಿದೆ. ಅಲ್ಲದೆ ಅಕ್ಟೋಬರ್ 14 ರ ಮುಂದಿನ ವಿಚಾರಣೆಗಿಂತ ಮುಂಚೆ ಈ ಬಗ್ಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ಕಾನೂನುಬದ್ಧ ಹೊಣೆಗಾರಿಕೆಯನ್ನು ಪಾಲಿಸದೆ ಅತಿಯಾದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ವಸ್ತುಗಳನ್ನು ಬಳಸಿರುವುದಕ್ಕೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧ ನ್ಯಾಯಮಂಡಳಿ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆದಿದೆ.