ಲಖನೌ: ಸರ್ಕಾರಿ ವೈದ್ಯರ ಗಾಢ ನಿರ್ಲಕ್ಷ್ಯದಿಂದ 4 ದಿನಗಳ ಹಸುಳೆ ಆಸ್ಪತ್ರೆಯ ಮೆಟ್ಟಿಲ ಮೇಲೆ ಕೊನೆಯುಸಿರೆಳೆದ ದಾರುಣ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಉಸಿರಾಟದ ತೊಂದರೆಯಿದ್ದ ಮಗುವನ್ನು ಕೂಡಲೆ ಅಡ್ಮಿಟ್ ಮಾಡಿಕೊಳ್ಳದೇ, ಅಲ್ಲಿಂದಿಲ್ಲಿಗೆ ಪೋಷಕರನ್ನು ಅಲೆದಾಡಿಸಿದ್ದರಿಂದಲೇ ಮಗು ಮೃತಪಟ್ಟಿತು ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಒಬ್ಬ ಡಾಕ್ಟರ್ನನ್ನು ಅಮಾನತು ಮಾಡಿದ್ದು, ಉಳಿದ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದೆ.
ಏನೀ ಪ್ರಕರಣದ ಹಿನ್ನೆಲೆ:
ಜೂನ್ 15ರಂದು ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಊರ್ವಶಿ ಎಂದು ಹೆಸರು ಸಹ ಇಡಲಾಗಿತ್ತು. ನಿನ್ನೆ ಮಗುವಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತು. ಕೂಡಲೆ ನಾವು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ, ಪುರುಷರ ವಿಭಾಗ ಸಿಬ್ಬಂದಿ ಮಹಿಳಾ ವಿಭಾಗಕ್ಕೆ ಕೊಂಡೊಯ್ಯುವಂತೆ ಹೇಳಿದರು. ಮಹಿಳಾ ವಿಭಾಗಕ್ಕೆ ಕರೆದೊಯ್ದರೆ ಹಾಸಿಗೆ ಇಲ್ಲವೆಂದು ಹೇಳಿ, ಮತ್ತೆ ಪುರುಷರ ವಿಭಾಗಕ್ಕೆ ಕಳಿಸಿದರು. ಮೂರು ಗಂಟೆಗಳ ಕಾಲ ಹೀಗೆ ಅಲೆದಾಡಿಸಿದ್ದರಿಂದ ಮನೆಗೆ ವಾಪಸಾಗಲು ಮುಂದಾದವು. ಆದರೆ ಮೆಟ್ಟಿಲುಗಳನ್ನು ಇಳಿಯುವಾಗಲೇ ಮಗು ಕಣ್ಮುಚ್ಚಿತು ಎಂದು ತಾಯಿ ದುಃಖದಿಂದ ಹೇಳಿಕೊಂಡಿದ್ದಾರೆ.
ಪುರುಷರ ವಿಭಾಗದ ಇನ್ಚಾರ್ಜ್ ಡಾ. ಕಮಲೇಂದ್ರ ಸ್ವರೂಪ್ ಗುಪ್ತ ಹಾಗೂ ಮಹಿಳಾ ವಿಭಾಗದ ಇನ್ಚಾರ್ಜ್ ಡಾ. ಅಲ್ಕಾ ಶರ್ಮ ಇಬ್ಬರೂ ಮಗುವಿನ ಸಾವಿನ ಹೊಣೆ ಹೊತ್ತುಕೊಳ್ಳಲು ನಿರಾಕರಿಸಿದ್ದಾರೆ. ಒಬ್ಬರ ಮೇಲೊಬ್ಬರು ಆರೋಪ ಸಹ ಮಾಡಿದ್ದಾರೆ.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು, ಪುರುಷ ವಿಭಾಗದ ಇನ್ಚಾರ್ಜ್ ಅಮಾನತಿಗೆ ಆದೇಶಿಸಿ, ಉಳಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದ್ದಾರೆ.