ಹೈದರಾಬಾದ್: ಅಮೆರಿಕ ಸರ್ಕಾರವು ಇತ್ತೀಚೆಗೆ F1 ವಿದ್ಯಾರ್ಥಿ ವೀಸಾ ನಿಯಮಗಳನ್ನು ಬದಲಾಯಿಸಿದೆ. ವೀಸಾ ನಿಯಮಗಳ ಬದಲಾವಣೆಯಿಂದ ಅಮೆರಿಕಕ್ಕೆ ವಿದ್ಯಾಭ್ಯಾಸ ಮಾಡಲು ಹೋಗಬಯಸುವ ಭಾರತೀಯ ವಿದ್ಯಾರ್ಥಿಗಳ ಮೇಲೂ ಪರಿಣಾಮವಾಗಲಿದೆ. F1 ವಿದ್ಯಾರ್ಥಿ ವೀಸಾ ಎಂದರೇನು ಹಾಗೂ ಈ ವೀಸಾ ನಿಯಮಗಳಲ್ಲಿ ಯಾವೆಲ್ಲ ಮಾರ್ಪಾಟು ಮಾಡಲಾಗಿದೆ ಎಂಬುದನ್ನು ನೋಡೋಣ.
F1 ಸ್ಟೂಡೆಂಟ್ ವೀಸಾ ಎಂದರೇನು?
ಅಮೆರಿಕದ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಅಥವಾ ಇಂಗ್ಲಿಷ್ ಭಾಷೆಯ ಅಧ್ಯಯನ ಮಾಡಲು ತೆರಳಬೇಕಾದರೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಈ ವೀಸಾ ಪಡೆದುಕೊಳ್ಳಬೇಕಾಗುತ್ತದೆ.
F1 ವೀಸಾ ಪಡೆದವರು ಪೂರ್ಣಾವಧಿ ಕಲಿಕೆಯ ವಿದ್ಯಾರ್ಥಿಗಳಾಗಿರಬೇಕು. ವಿದ್ಯಾಭ್ಯಾಸ ಪೂರ್ಣಗೊಂಡ ನಂತರವೂ 60 ದಿನಗಳವರೆಗೆ ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿರಬಹುದು. ಅಲ್ಲದೆ ಓಪಿಟಿ ಯೋಜನೆಯನ್ವಯ ಅಲ್ಲಿಯೇ ಇದ್ದು ಕೆಲಸ ಮಾಡುವ ಅರ್ಜಿ ಸಲ್ಲಿಸಿ ಅನುಮತಿ ಪಡೆದಿದ್ದರೆ ಮತ್ತಷ್ಟು ಕಾಲ ಇರಬಹುದು.
F1 ವೀಸಾ ನಿಯಮಾವಳಿಗಳ ಮಾರ್ಪಾಟು
ಕಳೆದ ಜುಲೈ 7 ರಂದು ಅಮೆರಿಕ ಸರ್ಕಾರ F1 ವೀಸಾ ನಿಯಮಗಳಿಗೆ ಕೆಲ ಮಾರ್ಪಾಟು ಮಾಡಿದೆ. ಕೋವಿಡ್-19 ಬಿಕ್ಕಟ್ಟಿನ ಕಾರಣದಿಂದ ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ಶಿಕ್ಷಣ ಮುಂದುವರೆಸುವ ವಿದೇಶಿ ವಿದ್ಯಾರ್ಥಿಗಳ ವೀಸಾ ಇನ್ನು ಮುಂದೆ ನವೀಕರಣ ಮಾಡುವುದಿಲ್ಲ ಎಂಬ ಹೊಸ ನಿಯಮವನ್ನು ಸರ್ಕಾರ ಜಾರಿ ಮಾಡಿದೆ.
ಅಕಾಡೆಮಿಕ್ ಕೋರ್ಸ್ಗಳಿಗೆ ದಾಖಲಾಗಿರುವ F1 ವೀಸಾ ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ M1 ವೀಸಾ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯಿಸಲಿದೆ. ಸದ್ಯ ಪೂರ್ಣರೂಪದಲ್ಲಿ ಆನ್ಲೈನ್ ಮೂಲಕ ವಿದ್ಯಾಭ್ಯಾಸ ಮುಂದುವರೆಸುತ್ತಿರುವ F1 ಹಾಗೂ M1 ವಿದ್ಯಾರ್ಥಿಗಳು ಈಗಲೇ ಅಮೆರಿಕದಿಂದ ಹೊರಗೆ ಹೋಗಬೇಕು, ಇಲ್ಲದಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮ!
ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಅತಿ ಹೆಚ್ಚಾಗಿದೆ. ಹೀಗಾಗಿ ನಮ್ಮ ದೇಶದ ವಿದ್ಯಾರ್ಥಿಗಳು ಹೊಸ ನಿಯಮದಿಂದ ಹೆಚ್ಚು ಬಾಧಿತರಾಗಲಿದ್ದಾರೆ. ಚೀನಾದ 369,548, ಭಾರತದ 202,014 ಹಾಗೂ ದಕ್ಷಿಣ ಕೊರಿಯಾದ 52,250 ವಿದ್ಯಾರ್ಥಿಗಳು ಪ್ರಸ್ತುತ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಮುಂದಿನ ದಾರಿ ಏನು?
ಈಗ F1 ವೀಸಾ ಮೇಲೆ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳುವುದು ಅನಿವಾರ್ಯವಾಗಬಹುದು. ಇನ್ನು ತಾವು ಅಧ್ಯಯನ ನಡೆಸುತ್ತಿರುವ ವಿವಿ ಪೂರ್ಣಾವಧಿ ಕ್ಯಾಂಪಸ್ ತರಗತಿಗಳನ್ನು ನಡೆಸುತ್ತಿದ್ದರೆ ಅವುಗಳಿಗೆ ನೋಂದಾಯಿಸಿಕೊಳ್ಳಬಹುದು. ಇಲ್ಲವಾದರೆ ಅಮೆರಿಕದ ಬೇರಾವುದೇ ವಿವಿಯ ಪೂರ್ಣಾವಧಿ ಕೋರ್ಸ್ಗೆ ನೋಂದಾಯಿಸಿಕೊಳ್ಳಬಹುದು.