ದೆಹಲಿ:ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಜಾಮಿಯಾ ವಿವಿ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ಗ್ರಂಥಾಲಯಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿರುವ ಸಿಸಿಟಿವಿ ವಿಡಿಯೋ ಇದೀಗ ವೈರಲ್ ಆಗಿದೆ.
ಜಾಮಿಯಾ ವಿದ್ಯಾರ್ಥಿಗಳ ಹಲ್ಲೆ ವಿಡಿಯೋ ಪೌರತ್ವ ಕಾಯ್ದೆ ವಿರುದ್ಧದ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಈ ವೇಳೆ ಕಾಲೇಜಿನೊಳಗೆ ಪೊಲೀಸರು ನುಗ್ಗಿ ಲಾಠಿ ಪ್ರಹಾರ ನಡೆಸಿದ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
"ಶೇಮ್ ಆನ್ ಯು ದೆಹಲಿ ಪೊಲೀಸ್" ಶೀರ್ಷಿಕೆ ಅಡಿಯಲ್ಲಿ ಜಾಮಿಯಾ ವಿದ್ಯಾರ್ಥಿಗಳ ಹಲ್ಲೆ ವಿಡಿಯೋ ವೈರಲ್ ಆಗಿದ್ದು, ಇಂದಿನ ಟ್ವಿಟ್ಟರ್ ಟ್ರೆಂಡಿಂಗ್ನಲ್ಲಿ 14.7 ಸಾವಿರ ಮಂದಿ ಈ ಕುರಿತಂತೆ ಚರ್ಚಿಸಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋ ಕುರಿತು ಓಖ್ಲಾ ಮೂಲದ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಟ್ವೀಟ್ ಮಾಡಿದ್ದು, ಜಾಮಿಯಾ ವಿದ್ಯಾರ್ಥಿಯ ಮೇಲೆ ಡಿಸೆಂಬರ್ 15 ರಂದು ಪೊಲೀಸರು ಲಾಠಿ ಚಾರ್ಜ್ಮಾಡಿದ್ದು ಅಮಿತ್ ಶಾ ಈ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಜಾಮಿಯಾ ವಿದ್ಯಾರ್ಥಿಗಳನ್ನು ಪೊಲೀಸರು ಥಳಿಸುತ್ತಿದ್ದಾರೆಂದು ತೋರಿಸುವ ವೀಡಿಯೊವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದು, ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ಉದ್ದೇಶಗಳು ಇಡೀ ದೇಶದ ಮುಂದೆ ತೆರೆದುಕೊಳ್ಳುತ್ತವೆ ಎಂದು ಹೇಳಿದ್ದಾರೆ. ಹಾಗೆಯೇ ಜಾಮಿಯಾ ವಿದ್ಯಾರ್ಥಿಗಳನ್ನು ಗ್ರಂಥಾಲಯದೊಳಗೆ ಥಳಿಸಲಾಗಿಲ್ಲ ಎಂದು ಗೃಹ ಸಚಿವರು ಮತ್ತು ದೆಹಲಿ ಪೊಲೀಸರು ಸುಳ್ಳು ಹೇಳುತ್ತಾರೆ ಎಂದು ಅವರು ಆರೋಪಿಸಿದ್ದಾರೆ.