ಪಣಜಿ:ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ಸಲುವಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಚಿವ ಸಂಪುಟವನ್ನು ಪುನರ್ ರಚಿಸುವುದಾಗಿ ತಿಳಿಸಿದ್ದಾರೆ. ಸಂಪುಟಕ್ಕೆ ಆಯ್ಕೆಯಾಗಿರುವ ನಾಲ್ವರು ನೂತನ ಸಚಿವರು ಇಂದು ಮಧ್ಯಾಹ್ನ 3 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದಾರೆ.
ಗೋವಾ ಸರ್ಕಾರದ ಪಾಲುದಾರ ಪಕ್ಷ ಗೋವಾ ಫಾರ್ವರ್ಡ್ ಪಕ್ಷದ ಮೂವರು ಮತ್ತು ಒಬ್ಬ ಪಕ್ಷೇತರ ಶಾಸಕ ರೋಹನ್ ಖೌಂಟೇ ಅವರನ್ನು ಈಗಿದ್ದ ಸಚಿವ ಸಂಪುಟದಿಂದ ಕೈ ಬಿಡಲಾಗಿದೆ ಎಂದು ಹೇಳಿದರು.
ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರನ್ನು ಹೇಳಲು ನಿರಾಕರಿಸಿದ ಅವರು, ನಾಲ್ವರೂ ಬಿಜೆಪಿಯವರು. ಅದರಲ್ಲಿ ಬುಧವಾರ ಬಿಜೆಪಿ ಸೇರಿದ ಶಾಸಕರಲ್ಲಿ ಮೂವರಿದ್ದಾರೆ. ಅದನ್ನು ಹೊರತು ಪಡಿಸಿ ನಾನು ಬೇರೆನೂ ಹೇಳಲು ಇಚ್ಚಿಸುವುದಿಲ್ಲ ಎಂದಿದ್ದಾರೆ.
ಉತ್ತಮ ಸರ್ಕಾರ ಆಡಳಿತ ನೀಡುವ ಸಲುವಾಗಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
ಪ್ರತಿಪಕ್ಷದ ಮಾಜಿ ನಾಯಕ ಚಂದ್ರಕಾಂತ್ ಕಾವ್ಲೇಕರ್, ಫಿಲಿಪ್ ನೆರಿ ರೊಡ್ರಿಗಸ್ ಮತ್ತು ಅಟಾನಾಸಿಯೊ ಮೊನ್ಸೆರಾಟ್ಟೆ ಅವರನ್ನು ಡೆಪ್ಯೂಟಿ ಸ್ಪೀಕರ್ ಮೈಕೆಲ್ ಲೋಬೊ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಲಿದ್ದಾರೆ ಎಂಬ ಉಹಾಪೋಹಗಳು ಹರಿದಾಡುತ್ತಿವೆ. ಆದರೆ ಈ ವದಂತಿಗಳನ್ನ ಸಿಎಂ ಇವೆಲ್ಲ ಸುಳ್ಳು ಎಂದು ತಳ್ಳಿ ಹಾಕಿದ್ದಾರೆ.
ಮೂರು ತಿಂಗಳ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಾವಂತ್ ಅವರ ಎರಡನೇ ಬಾರಿಗೆ ಕ್ಯಾಬಿನೆಟ್ ಪುನರ್ ರಚನೆ ಮಾಡಲಿದ್ದಾರೆ. ಅಂದಿನ ಉಪಮುಖ್ಯಮಂತ್ರಿ ಸುದಿನ್ ಧವಲಿಕರ್ ಅವರನ್ನು ಕೈಬಿಟ್ಟ ನಂತರ ಸಾವಂತ್ ಅವರು ಎಂಜಿಪಿಯಿಂದ ಬೇರ್ಪಟ್ಟ ಶಾಸಕ ದೀಪಕ್ ಪೌಸ್ಕರ್ ಅವರನ್ನು ಸೇರಿಸಿಕೊಂಡಿದ್ದರು.
ನೂತನ ಸಚಿವರ ಸೇರಿಸಿಕೊಳ್ಳುವ ಸಲುವಾಗಿ ಸಂಪುಟದ ನಾಲ್ವರು ಸಚಿವರನ್ನು ರಾಜೀನಾಮೆ ನೀಡುವಂತೆ ಸಾವಂತ್ ಕೋರಿದ್ದರು. ಜಿಎಫ್‌ಪಿಯು ಎನ್‌ಡಿಎಯದ ಒಂದು ಭಾಗ. ಈ ಬಗ್ಗೆ ಕೇಸರಿ ಪಕ್ಷದ ರಾಷ್ಟ್ರೀಯ ನಾಯಕತ್ವದೊಂದಿಗೆ ಮಾತುಕತೆ ನಡೆಸಿದ ನಂತರ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸೇರಿಕೊಂಡಿದ್ದೇವೆ. ಅದರಂತೆ ನಾವು ಕೇಂದ್ರದಲ್ಲಿ ಎನ್‌ಡಿಎ ನಾಯಕರೊದಿಗೆ ಮಾತನಾಡಿದ ನಂತರವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಗೋವಾ ಫಾರ್ವರ್ಡ್ ಪಕ್ಷದ ಸಚಿವ ಸರ್ದೇಸಾಯಿ ಹೇಳಿದ್ದಾರೆ. ಹತ್ತು ಕಾಂಗ್ರೆಸ್ ಶಾಸಕರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಮೂಲಕ ಗೋವಾ ವಿಧಾನಸಭೆಯಲ್ಲಿ ಬಿಜೆಪಿ ತನ್ನ ಸಂಖ್ಯಾ ಬಲವನ್ನ 27ಕ್ಕೆ ಹೆಚ್ಚಿಸಿಕೊಂಡಿದೆ.