ನವದೆಹಲಿ: ಪ್ರಧಾನಿ ಮೋದಿ ಪ್ರತಿಯೊಬ್ಬರ ಅಕೌಂಟ್ಗೂ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿಲ್ಲ. ಅಷ್ಟೊಂದು ಕಪ್ಪು ಹಣ ಇದೆ ಎಂಬುದಾಗಿ ಹೇಳಿದ್ದೆವು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡಿರುವ ಗೃಹ ಸಚಿವ ರಾಜನಾಥ್ ಸಿಂಗ್, ಏರ್ಸ್ಟ್ರೈಕ್ ಬಗ್ಗೆ ಸರ್ಕಾರ ಭದ್ರತಾ ಪಡೆಗಳಿಂದ ಸಾಕ್ಷ್ಯ ಕೇಳಿಲ್ಲ. ಬದಲಾಗಿ ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ಉಗ್ರರ ದಮನ ಆಗಬೇಕು ಎಂಬುದಷ್ಟೇ ಸರ್ಕಾರದ ಕಾಳಜಿ ಆಗಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಕಾಶ್ಮೀರ ವಿಷಯದ ಬಗ್ಗೆ ಮಾತನಾಡಿದ ಅವರು, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ 35 ಎ ಹಾಗೂ 370 ನೇ ವಿಧಿ ರದ್ದು ಮಾಡುವುದಾಗಿ ಘೋಷಿಸಿರುವ ಬಿಜೆಪಿ ಪ್ರಣಾಳಿಕೆ ವಿಷಯವನ್ನ ಸಮರ್ಥಿಸಿಕೊಂಡಿದ್ದಾರೆ.
ಇನ್ನು 35 ಎ ವಿಧಿ ರದ್ದು ಮಾಡಿದರೆ ಕಾಶ್ಮೀರ ಅಷ್ಟೇ ಅಲ್ಲ ಇಡೀ ಭಾರತವೇ ಹೊತ್ತಿ ಉರಿಯುತ್ತದೆ ಎಂದು ಹೇಳಿರುವ ಜಮ್ಮು ಕಾಶ್ಮೀರದ ಸಿಎಂ ಮೆಹಬೂಬಾ ಮುಫ್ತಿ ಮಾತಿಗೂ ಅವರು ಟಾಂಗ್ ನೀಡಿದ್ದಾರೆ. ಮುಫ್ತಿ ಇಂತಹ ಹೇಳಿಕೆ ಮೂಲಕ ಅವರೆಷ್ಟು ಹತಾಶಗೊಂಡಿದ್ದಾರೆ ಎಂಬುದನ್ನು ತೋರಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
370ನೇ ವಿಧಿ ತೆಗೆದು ಹಾಕಿದರೆ ಕಾಶ್ಮೀರ ಭಾರತದಿಂದ ಪ್ರತ್ಯೇಕ ಆಗಲಿದೆ ಎಂಬ ಫಾರೂಖ್ ಅಬ್ದುಲ್ಲಾ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ಕಾಶ್ಮೀರ ಭಾರತದಿಂದ ಎಂದೆಂದಿಗೂ ಬೇರ್ಪಡೆಯಾಗಲು ಸಾಧ್ಯವೇ ಇಲ್ಲ. ಯಾರಿಂದಲೂ ಕಾಶ್ಮೀರ ಬೇರ್ಪಡಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ತಿರುಗೇಟು ನೀಡಿದರು.