ನವದೆಹಲಿ: ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ಸ್ಥಾಯಿ ಸಮಿತಿಯ ಮತ್ತಷ್ಟು ಸದಸ್ಯರು ಬುಧವಾರ ತಮ್ಮ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿರುವುದರಿಂದ ಹಿಮಾಲಯನ್ ದೇಶದ ಪ್ರಧಾನಿ ಕೆ.ಪಿ. ಶರ್ಮಾ ಮುಂದಿನ ದಿನಗಳಲ್ಲಿ ತಮ್ಮ ಸರ್ವೋನ್ನತ ಹುದ್ದೆಗೆ ಹೆಚ್ಚಿನ ಸವಾಲುಗಳನ್ನು ಎದುರಿಸುವುದು ಸ್ಪಷ್ಟವಾಗಿದೆ.
ಕಠ್ಮಂಡುವಿನಲ್ಲಿ ನಡೆಯುತ್ತಿರುವ ಸ್ಥಾಯಿ ಸಮಿತಿ ಸಭೆಯಲ್ಲಿ ಬುಧವಾರ ಕೇವಲ ಐದು ಸದಸ್ಯರು ಮಾತನಾಡಿದ್ದರೂ, ಅವರೆಲ್ಲರೂ ಪ್ರಧಾನ ಮಂತ್ರಿಯಾಗಿ ಓಲಿಯ ಮುಂದುವರಿಕೆ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಕಮ್ಯುನಿಸ್ಟ್ ಪಕ್ಷದ ಪ್ರಮುಖ ಮೂವರು ನಾಯಕರಾದ ಪೇಶಾಲ್ ಖತಿವಾಡಾ, ಮಾಟ್ರಿಕಾ ಯಾದವ್ ಮತ್ತು ಲೀಲಮಣಿ ಪೋಖ್ರೆಲ್ ಅವರು ಪ್ರಧಾನ ಮಂತ್ರಿ ಒಲಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ, ಇತರ ಇಬ್ಬರು ನಾಯಕರಾದ - ನಂದಾ ಕುಮಾರ್ ಪ್ರಸೈನ್ ಮತ್ತು ಯೋಗೇಶ್ ಭಟ್ಟರೈ ಅವರು ಪ್ರಧಾನಿ ತಮ್ಮ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಪ್ರಧಾನ ಮಂತ್ರಿ ಒಲಿ ಅವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯನ್ನು ಕಮ್ಯುನಿಸ್ಟ್ ಪಕ್ಷದ ಸದಸ್ಯರ ಟೀಕೆಗಳ ನಂತರ ಸ್ಥಗಿತಗೊಳಿಸಲಾಗಿದೆ. ಮತ್ತೆ ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದುವರಿಯಲಿದೆ. ಇತ್ತೀಚಿನ ದಿನಗಳಲ್ಲಿ ಚೀನಾ ಪರವಾಗಿ ನೇಪಾಳದ ಪ್ರಧಾನಿ ಒಲಿಯ ನಡವಳಿಕೆಗಳು, ಭಾರತ-ನೇಪಾಳ ಸಂಬಂಧಗಳಿಗೆ ಭಾರಿ ಒತ್ತಡವನ್ನುಂಟು ಮಾಡಿದೆ.
ಕಳೆದ ತಿಂಗಳು ಪ್ರಧಾನಿ ಓಲಿ, ಸಂಸತ್ತಿನ ಮೂಲಕ ಭಾರತದ ಭೂಪ್ರದೇಶದ ವ್ಯಾಪ್ತಿಗೆ ಬರುವ ಕಲಾಪಣಿ, ಲಿಪುಲೆಖ್ ಮತ್ತು ಲಿಂಪಿಯಾಧುರಾ ಸೇರಿದಂತೆ ಕೆಲ ಭೂಪ್ರದೇಶಗಳು ನೇಪಾಳಕ್ಕೆ ಸೇರುತ್ತವೆ ಎಂಬುವಂತೆ ದೇಶದ ಹೊಸ ರಾಜಕೀಯ ನಕ್ಷೆಯನ್ನು ಬಿಡುಗಡೆ ಮಾಡಿದರು. ಕೈಲಾಸ ಮಾನಸರೋವರಕ್ಕೆ ಹೋಗುವ ಯಾತ್ರಾರ್ಥಿಗಳಿಗಾಗಿ ನಿರ್ಮಿಸಲಾಗಿರುವ ಲಿಪುಲೆಖ್‌ವರೆಗಿನ ರಸ್ತೆಯನ್ನು ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮೇ ತಿಂಗಳಲ್ಲಿ ಉದ್ಘಾಟಿಸಿದ ನಂತರ ನೇಪಾಳದ ಕಡೆಯಿಂದ ಈ ಬೆಳವಣಿಗೆ ನಡೆದಿದೆ.
ನೇಪಾಳದ ಪ್ರಧಾನಿ ಒಲಿ ಅವರ ನಡವಳಿಕೆ ಕುರಿತಂತೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತವು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನಿಮ್ಮ ಈ ನಿರ್ಣಯವನ್ನು “ಒಪ್ಪಲಾಗದು” ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಇದಾದ ಬಳಿಕ ಭಾನುವಾರ ಪ್ರತಿಕ್ರಿಯಿಸಿರುವ ಓಲಿ, ಭಾರತವು ತನ್ನನ್ನು ಪ್ರಧಾನಿ ಹುದ್ದೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದೆ ಎಂದು ವೃಥಾ ಆರೋಪ ಮಾಡಿದ್ದಾರೆ.
"ದೆಹಲಿಯ ಚಟುವಟಿಕೆ, ನೇಪಾಳದ ರಾಜಕೀಯದ ಒಂದು ನಿರ್ದಿಷ್ಟ ವಿಭಾಗ ಮತ್ತು ಅವರ ಸಹಯೋಗವು ಗಡಿ ವಿವಾದದ ಬಗ್ಗೆ ನನ್ನ ನಿಲುವಿನಿಂದಾಗಿ ನನ್ನನ್ನು ಕೆಳಗಿಳಿಸುವ ಉದ್ದೇಶವನ್ನು ಹೊಂದಿದೆ" ಎಂದು ಓಲಿ ಭಾನುವಾರ ಕಠ್ಮಂಡುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. "ನನ್ನನ್ನು ಹೊರಹಾಕುವಲ್ಲಿ ಅವರು ಯಶಸ್ವಿಯಾಗುತ್ತಾರೆಂದು ಯಾರೂ ಭಾವಿಸಬಾರದು." ಎಂದು ಓಲಿ ಇದೇವೇಳೆ ತಿಳಿಸಿದ್ದಾರೆ.
ವೀಕ್ಷಕರ ಪ್ರಕಾರ, ಒಲಿ ಅವರ ಕ್ರಮಗಳು ಅವರು ತಮ್ಮ ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿರ್ವಹಿಸದ ಕಾರಣ ಎನ್‌ಸಿಪಿಯೊಳಗಿನ ವಿರೋಧದಿಂದ ಉಂಟಾಗುತ್ತದೆ. ಕೊರೋನಾ ವೈರಸ್ ಪರಿಸ್ಥಿತಿ ನಿಭಾಯಿಸುವಲ್ಲಿ ಆದ ವೈಫಲ್ಯವನ್ನ ಮರೆಮಾಚುವ ದೃಷ್ಟಿಯಿಂದ ವಿಷಯಾಂತರ ಮಾಡಲು ಓಲಿ ಗಡಿ ವಿವಾದವನ್ನ ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ.
ಮಂಗಳವಾರ ನಡೆದ ಸ್ಥಾಯಿ ಸಮಿತಿಯ ಸಭೆಯಲ್ಲಿ ಎನ್‌ಸಿಪಿ ಸಹ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಪುಷ್ಪಾ ಕಮಲ್ ದಹಲ್ “ಪ್ರಚಂಡ” ಮತ್ತು ಹಿರಿಯ ನಾಯಕರಾದ ಮಾಧವ್ ಕುಮಾರ್ ನೇಪಾಳ್, ಝಲಾ ನಾಥ್ ಖನಾಲ್, ಬಾಂದೇವ್ ಗೌತಮ್ ಮತ್ತು ನಾರಾಯಣ್ ಕಾಜಿ ಶ್ರೇಷ್ಠಾ ಮತ್ತು ಇತರ 11 ಸದಸ್ಯರು ಸೇರಿ ಪ್ರಧಾನಿ ಸ್ಥಾನಕ್ಕೆ ಒಲಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ಧಾರೆ.
ಬುಧವಾರದ ಸ್ಥಾಯಿ ಸಮಿತಿ ಸಭೆಯ ನಂತರ, ಕಠ್ಮಂಡು ಮೂಲದ ರಾಜಕೀಯ ಅರ್ಥಶಾಸ್ತ್ರಜ್ಞ ಹರಿ ರೋಕಾ ಈಟಿವಿ ಭಾರತ್‌ಗ ಜೊತೆ ಮಾತನಾಡಿದ್ದು, ಒಲಿ ತಮ್ಮ ಪಕ್ಷದೊಳಗೆ ಬಹುಮತ ಕಳೆದುಕೊಂಡಿದ್ದಾರೆ. ಪಕ್ಷದ 45 ಸದಸ್ಯರ ಸಮಿತಿಯಲ್ಲಿ ಕೇವಲ 15 ಮಂದಿ ಮಾತ್ರ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
"ಪಕ್ಷದ ಒಳಗೆ ಅವರನ್ನು ಪ್ರಚೋದಿಸುವುದು ಮುಂದುವರಿಸಿದರೆ, ಕಮ್ಯುನಿಸ್ಟ್ ಪಕ್ಷವನ್ನು ವಿಭಜಿಸುವುದಾಗಿ ಪ್ರಧಾನಿ ಹೇಳುತ್ತಿದ್ದಾರೆ" ಎಂದು ಪತ್ರಕರ್ತರಿಗೆ ರೋಕಾ, ನೇಪಾಳದ ರಾಜಧಾನಿಯಿಂದ ದೂರವಾಣಿ ಮೂಲಕ ತಿಳಿಸಿದ್ದಾರೆ.