ನವದೆಹಲಿ: ನೇಪಾಳದ ಪ್ರಧಾನಿ ಕೆ. ಶರ್ಮಾ ಓಲಿ ಅವರನ್ನು ಪ್ರಧಾನಿ ಹುದ್ದೆಯಿಂದ ಕಿತ್ತೊಗೆಯಬೇಕೆಂಬ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಅವರ ವಿವಾದಾತ್ಮಕ ನಿರ್ಧಾರಗಳು ಹಾಗೂ ಕ್ರಮಗಳು, ಭಾರತ ವಿರೋಧಿ ಹೇಳಿಕೆಗಳು ಅವರಿಗೆ ಸಮಸ್ಯೆ ತಂದೊಡ್ಡಿವೆ. ಆದರೆ, ಹಿಮಾಲಯದ ಈ ಪುಟ್ಟ ರಾಷ್ಟ್ರದ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಪ್ರಕಾರ, ಓಲಿ ಸುಲಭವಾಗಿ ತಮ್ಮ ಹುದ್ದೆ ಬಿಟ್ಟುಕೊಡುವ ಸಾಧ್ಯತೆ ಇಲ್ಲ. ಕನಿಷ್ಠ ಇನ್ನೊಂದು ತಿಂಗಳು ಅವರು ತಮ್ಮ ಹುದ್ದೆಗೆ ಅಂಟಿಕೊಳ್ಳುವ ಸಾಧ್ಯತೆ ಇದೆ.
ಗುರುವಾರದಂದು ಇಬ್ಬರು ಮಾಜಿ ಪ್ರಧಾನಿಗಳಾದ ಪುಷ್ಪ ಕಮಾಲ್ ದಹಾಲ್ ಹಾಗೂ ಮಾಧವ ನೇಪಾಳ್ ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಓಲಿ ಅವರನ್ನು ಆಗ್ರಹಿಸಿದ್ದಾರೆ. ಅವರಿಬ್ಬರೂ ಓಲಿಯವರನ್ನು ಭೇಟಿಯಾಗಿ ತಮ್ಮ ಆಗ್ರಹ ಮುಂದಿಟ್ಟಿದ್ದಾರೆ. ದಹಾಲ್ ಅವರು ಆಡಳಿತಾರೂಢ ನೇಪಾಳದ ಕಮ್ಯೂನಿಸ್ಟ್ ಪಕ್ಷದ ಸಹ ಅಧ್ಯಕ್ಷರಾಗಿದ್ದರೆ, ಮಾಧವ ನೇಪಾಳ ಪಕ್ಷದ ಇನ್ನೊಬ್ಬ ಹಿರಿಯ ನಾಯಕ.
ಮೂಲಗಳ ಪ್ರಕಾರ, ದಹಾಲ್ ಹಾಗೂ ಮಾಧವ ಅವರು, ಓಲಿ ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳು, ಹಾಗೂ ರಾಜತಾಂತ್ರಿಕ ವಿವಾದಗಳ ಸೃಷ್ಟಿ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಆಗ್ರಹಿಸಿದ್ದಾರೆ ಎನ್ನಲಾಗಿದೆ. ಓಲಿ, ತಮ್ಮ ಪಕ್ಷದ ಸದಸ್ಯರಿಂದಲೇ ರಾಜೀನಾಮೆಗೆ ಭಾರೀ ಒತ್ತಡ ಎದುರಿಸುತ್ತಿದ್ದಾರೆ. ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಸ್ಥಾಯಿ ಸಮಿತಿ, ಪಕ್ಷದ ಸದಸ್ಯರಿಂದ ತಮ್ಮ ಆಡಳಿತವೈಖರಿ ಹಿನ್ನೆಲೆಯಲ್ಲಿ ರಾಜೀನಾಮೆಯ ಒತ್ತಡ ಎದುರಿಸುತ್ತಿದ್ದಾರೆ.
ಈ ನಡುವೆ, ದೇಶದ ಅತಿ ದೊಡ್ಡ ಅಭಿವೃದ್ಧಿ ಕ್ಷೇತ್ರದ ಪಾಲುದಾರ ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧ, ಇನ್ನಷ್ಟು ಕೆಳಕ್ಕಿಳಿದಿದೆ. ಭಾರತದ ಭಾಗವಾಗಿರುವ ಕಾಲಾಪಾನಿ, ಲಿಪುಲೇಖ್ ಹಾಗೂ ಲಿಂಪಿಯಾಧುರವನ್ನು ತನ್ನ ರಾಜಕೀಯ ಭೂಪಟದ ಭಾಗವಾಗಿ ತೋರಿಸುವ ಹೊಸ ಭೂಪಟಕ್ಕೆ ಸಂಸತ್‍ನಲ್ಲಿ ಒಪ್ಪಿಗೆ ಪಡೆಯುವ ಮೂಲಕ ಓಲಿ, ಈ ವಿವಾದಕ್ಕೆ ಕಾರಣರಾಗಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೇ ತಿಂಗಳಿನಲ್ಲಿ ಲಿಪುಲೇಖ್‍ವರೆಗೆ ನಿರ್ಮಿಸಲಾಗಿರುವ ಹೊಸ ರಸ್ತೆಯನ್ನು ಉದ್ಘಾಟಿಸಿದ್ದೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ. ಕೈಲಾಸ ಮಾನಸ ಸರೋವರದ ಯಾತ್ರಾರ್ಥಿಗಳಿಗೆ ಈ ರಸ್ತೆ ಉಪಯುಕ್ತವಾಗಿದೆ.
ನೇಪಾಳದ ಸಂಸತ್‍ನ ಪ್ರತಿನಿಧಿಗಳ ಸಭೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಈ ಹೊಸ ಭೂಪಟಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ, ಜೂನ್13ರಂದು ಸಂಸತ್‍ನ ಕೆಳಮನೆ ಕೂಡಾ ಇದಕ್ಕೆ ಒಪ್ಪಿಗೆ ಸೂಚಿಸಿತು. ಇದಕ್ಕೆ ಭಾರತ ಸರಕಾರ ತೀಕ್ಣವಾಗಿ ಪ್ರತಿಕ್ರಿಯಿಸಿತು. ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್ ಶ್ರೀ ವತ್ಸ ಭಾರತದ ವಿರೋಧವನ್ನು ಸ್ಪಷ್ಟಪಡಿಸಿದ್ದರು.
''ಕೃತಕವಾಗಿ ಭೂಪಟವನ್ನು ವಿಸ್ತರಿಸುವ ನೇಪಾಳದ ಕುತಂತ್ರಕ್ಕೆ ಯಾವುದೇ ಐತಿಹಾಸಿಕ ಆಧಾರ ಇಲ್ಲ. ಹೀಗಾಗಿ ಇದು ಸಮರ್ಥನೀಯವೂ ಅಲ್ಲ. ಇದು ಭಾರತ-ನೇಪಾಳ ನಡುವಣ ಎಲ್ಲಾ ಗಡಿ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಎರಡೂ ದೇಶಗಳ ನಡುವಣ ತಿಳುವಳಿಕೆಗೆ ಕೂಡಾ ವಿರುದ್ಧವಾದದ್ದು'' ಎಂದಿದ್ದರು. ಆದರೆ, ಓಲಿಯವರಿಗೆ ಆಗಬಹುದಾದ ಮುಖಭಂಗ ತಪ್ಪಿಸಲು, ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ, ಈ ಎಲ್ಲಾ ವಿವಾದಗಳನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದ್ದರು.
"ಈ ವಿವಾದವನ್ನು ರಾಜತಾಂತ್ರಿಕ ಉಪಕ್ರಮದ ಮೂಲಕ ಬಗೆಹರಿಸುವ ಆತ್ಮವಿಶ್ವಾಸ ನಮಗಿದೆ. ಭಾರತ-ನೇಪಾಳ ನಡುವಣ ಬಹುಕೋನಗಳ ಸಂಬಂಧವನ್ನು ಹಾಳುಗೆಡವಲು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಾರದು. ಭಾರತ ಹಾಗೂ ನೇಪಾಳದ ನಡುವಣ ಒಟ್ಟಾರೆ ಸಂಬಂಧವನ್ನು ಈ ವಿವಾದ ಹಾಳುಗೆಡವಲಾರದು," ಎಂದು ಗ್ಯಾವಲಿ ತಿಳಿಸಿದ್ದರು. ಅವರು ಜೂನ್ 29ರಂದು ಈ ಹೇಳಿಕೆಯನ್ನು ನೇಪಾಳದ ಸಂಸತ್‍ನಲ್ಲಿ ನೀಡಿದ್ದರು.
ಓಲಿ ಭಾರತ ವಿರೋಧಿ ಹೇಳಿಕೆಗಳನ್ನು ಸತತವಾಗಿ ನೀಡಿದ ಒಂದು ದಿನದ ಬಳಿಕ ಈ ಹೇಳಿಕೆ ಬಂದಿದೆ. ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿ ಓಲಿ, ಭಾರತ ತನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಕೋವಿಡ್ 19 ಸಾಂಕ್ರಾಮಿಕ ರೋಗ ನೇಪಾಳದ ಜನರ ಸಮಸ್ಯೆಗಳನ್ನು ಉಲ್ಬಣಗೊಳಿಸಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗಾಯಕ್ಕೆ ಉಪ್ಪು ಸವರುವಂತೆ, ಓಲಿ ಸರಕಾರ, ನಾಗರಿಕತೆ ತಿದ್ದುಪಡಿ ಮಸೂದೆ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಈ ಮಸೂದೆಯನ್ನು ಸಂಸತ್‍ನ ಗೃಹ ಸಚಿವಾಲಯ ಹಾಗೂ ಉತ್ತಮ ಆಡಳಿತ ಮೇಲಿನ ಸ್ಥಾಯಿ ಸಮಿತಿ ಜೂನ್21ರಂದು ಒಪ್ಪಿಕೊಂಡಿದೆ.
ಈ ಹೊಸ ತಿದ್ದುಪಡಿ ಪ್ರಕಾರ, ನೇಪಾಳದ ವರನನ್ನು ಮದುವೆಯಾಗುವ ವಿದೇಶಿ ಮಹಿಳೆ ದೇಶದ ನಾಗರಿಕತೆ ಪಡೆಯಲು 7 ವರ್ಷ ಕಾಯಬೇಕು. ಈ ಹಿಂದೆ, ನೇಪಾಳದ ವರನನ್ನು ಮದುವೆಯಾದ ಕೂಡಲೇ ವಧು ನೇಪಾಳಿ ನಾಗರಿಕತೆ ಪಡೆಯುತ್ತಿದ್ದಳು. ಇದು ನೇಪಾಳ ಹಾಗೂ ಭಾರತ ದೇಶಗಳೆರಡಲ್ಲೂ ಉದ್ವಿಗ್ನತೆ ಸೃಷ್ಟಿಸಿದೆ. ಅದರಲ್ಲೂ ಹೆಚ್ಚಾಗಿ ಗಡಿಭಾಗದಲ್ಲಿರುವ ಭಾರತೀಯ ಕುಟುಂಬಗಳಲ್ಲಿ ಇದು ಆತಂಕ ಸೃಷ್ಟಿಸಿದೆ. ಏಕೆಂದರೆ, ಇಂತಹ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳನ್ನು ನೇಪಾಳ ವರರಿಗೆ ಮದುವೆ ಮಾಡಿ ಕೊಟ್ಟಿವೆ.
ಗಾಯದ ಮೇಲೆ ಬರೆ ಎನ್ನುವಂತೆ, ಈ ವಾರದ ಮೊದಲ ಭಾಗದಲ್ಲಿ ಓಲಿ ಅಯೋಧ್ಯೆ ಬಗ್ಗೆ ನೀಡಿದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಓಲಿ ಹೇಳಿಕೆ ಪ್ರಕಾರ ನೈಜ ಅಯೋಧ್ಯೆ ನೇಪಾಳದಲ್ಲಿದೆ. ನೈಜ ಶ್ರೀ ರಾಮ ಕೂಡ ನೇಪಾಳದವನೇ. ನೇಪಾಳದ ಪರ್ಸಾ ಜಿಲ್ಲೆಯ ತೋರಿ ಬಳಿ ಇರುವ ಅಯೋಧ್ಯೆ ನಿಜವಾದ ಅಯೋಧ್ಯೆ. ಇಲ್ಲಿಯೇ ಶ್ರೀ ರಾಮ ಹುಟ್ಟಿ ಬೆಳೆದದ್ದು. ಈ ಹೇಳಿಕೆ ನೇಪಾಳದ ಜನತೆ ಹಾಗೂ ಓಲಿ ಪಕ್ಷದ ನಾಯಕರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ. ಅವರದ್ದೇ ಪಕ್ಷದ ನಾಯಕ ಬಾಮ್ದೇವ್ ಗೌತಮ್ ಈ ಹೇಳಿಕೆ ಹಿಂತೆಗೆದುಕೊಂಡು ಕ್ಷಮಾಪಣೆ ಕೇಳುವಂತೆ, ಓಲಿಯವರನ್ನು ಆಗ್ರಹಿಸಿದ್ದಾರೆ.
ವೀಕ್ಷಕರ ಪ್ರಕಾರ, ಪ್ರಧಾನಿ ಓಲಿ ಇಂತಹ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವುದು ತಮ್ಮ ವಿರೋಧಿಗಳ ಗಮನವನ್ನು ಬೇರೆಡೆಗೆ ಸೆಳೆಯಲು. ಕೋವಿಡ್ 19 ನಿರ್ವಹಣೆಯಲ್ಲಿ ಎಡವಿರುವ ಓಲಿ ರಾಜೀನಾಮೆಗೆ ಜನರಿಂದ ಹಾಗೂ ಪಕ್ಷದ ನಾಯಕರಿಂದ ಭಾರೀ ಒತ್ತಡ ಬಂದಿದೆ. ಇದನ್ನು ತಪ್ಪಿಸಲು ಅವರು ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂಬ ಆರೋಪವಿದೆ. ದಹಾಲ್, ಓಲಿ ಪ್ರಧಾನಿ ಹಾಗೂ ಕಮ್ಯೂನಿಷ್ಟ್ ಪಕ್ಷದ ಸಹ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪಕ್ಷದ ಸ್ಥಾಯಿ ಸಮಿತಿ ಈ ಸಂಬಂಧ ಹಲವು ಸುತ್ತಿನ ಸಭೆ ನಡೆಸಿದೆ. ಈ ನಡುವೆ ಶುಕ್ರವಾರ ನಿಗದಿಯಾಗಿದ್ದ ಸ್ಥಾಯಿಸಮಿತಿಯ ಇನ್ನೊಂದು ಸಭೆ, ಭಾನುವಾರಕ್ಕೆ ಮುಂದೂಡಲ್ಪಟ್ಟಿದೆ.
ಕಮ್ಯೂನಿಸ್ಟ್ ಪಕ್ಷದ ಸ್ಥಾಯಿ ಸಮಿತಿಯ 44 ಸದಸ್ಯರ ಪೈಕಿ 13 ಜನ ಮಾತ್ರ ಓಲಿ ಬೆಂಬಲಕ್ಕಿದ್ದಾರೆ. ಉಳಿದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಸಂಸತ್‍ನಲ್ಲಿ ಚರ್ಚೆಗೆ ಬರಬಾರದು ಎಂಬ ಕಾರಣಕ್ಕೆ ಸಂಸತ್‍ನ ಅಧಿವೇಶನವನ್ನು ಒಂದು ಅಧ್ಯಕ್ಷೀಯ ಆದೇಶದ ಪ್ರಕಾರ ಮುಂದೂಡಿದ್ದಾರೆ. "ಈ ಹಂತದಲ್ಲಿ ಓಲಿ ತಮ್ಮ ಹುದ್ದೆಗೆ ತರಾತುರಿಯಲ್ಲಿ ರಾಜೀನಾಮೆ ನೀಡಲಾರರು. ಕಳೆದ ಕೆಲವು ತಿಂಗಳುಗಳಿಂದ ಎದುರಿಸುತ್ತಿರುವ ಪ್ರತಿಕೂಲವನ್ನು ಅವರು ಇನ್ನೂ ಕೆಲವು ತಿಂಗಳಲ್ಲಿ ಸರಿಪಡಿಸಲು ಅವರು ಪ್ರಯತ್ನಿಸಬಹುದು," ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಈಟಿವಿ ಭಾರತದ ಜೊತೆಗೆ ಕಾಠ್ಮಂಡುವಿನಿಂದ ಫೋನ್ ಮೂಲಕ ಮಾತನಾಡಿದ, ಅಲ್ಲಿನ ರಾಜಕೀಯ ಆರ್ಥಿಕ ತಜ್ಞ ಹರಿ ರೋಕಾ, ಭಾನುವಾರ ನಡೆಯಲಿರುವ ನೇಪಾಳ ಕಮ್ಯೂನಿಸ್ಟ್ ಪಕ್ಷದ ಸ್ಥಾಯಿ ಸಮಿತಿ ಸಭೆ, ಓಲಿ ಪಾಲಿಗೆ ನಿರ್ಣಾಯಕವಲ್ಲ. ಅವರು ಆಗಸ್ಟ್ ತಿಂಗಳ ದ್ವಿತೀಯಾರ್ಧದಲ್ಲಿ ಪಕ್ಷದ ಕೇಂದ್ರ ಸಮಿತಿಯ ಸಭೆ ಕರೆಯುವ ಸಾಧ್ಯತೆ ಇದೆ. ಈ ಸಭೆಯ ನಿರ್ಧಾರ ಓಲಿ ಅವರ ಭವಿಷ್ಯ ನಿರ್ಧರಿಸಲಿದೆ ಎನ್ನುತ್ತಾರೆ.
ಅವರ ಪ್ರಕಾರ ಓಲಿ, ಯಾವುದನ್ನಾದರೂ ಅತ್ಯುತ್ತಮವಾಗಿ ತಿರುಚಬಲ್ಲ ಸಾಮರ್ಥ್ಯವುಳ್ಳ ವ್ಯಕ್ತಿ. ಆದರೆ ಅವರು ತಿರುಚಿದ ಹೇಳಿಕೆ ನೀಡಿದ ಬಳಿಕ, ಅವರ ಬೆಂಬಲಿಗ ಸಚಿವ, ವಿದೇಶಾಂಗ ಖಾತೆಯನ್ನು ಹೊಂದಿರುವ ಗ್ಯಾವಲಿ ಅವರ ಸಮರ್ಥನೆ ಅಥವಾ ಸ್ಪಷ್ಟೀಕರಣ ನೀಡಲು ಆರಂಭಿಸುತ್ತಾರೆ. ಯಾವುದೇ ಹೊಸ ವಿವಾದ ಸೃಷ್ಟಿಯಾಗಬಾರದು ಎನ್ನುವುದು ಗ್ಯಾವಲಿ ಉದ್ದೇಶ. ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ ಎಂದರೆ, ಓಲಿ ಅವರು ಅಯೋಧ್ಯೆಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ. ಈ ವಿವಾದ ಸೃಷ್ಟಿಯಾದ ಬಳಿಕ, ನೇಪಾಳದ ವಿದೇಶಾಂಗ ಇಲಾಖೆ, ಪ್ರಧಾನಿಯವರ ಈ ಹೇಳಿಕೆ ಬಗ್ಗೆ ಸ್ಪಷ್ಟೀಕರಣದ ಸ್ಟೇಟ್ಮೆಂಟ್ ನೀಡಿತು.
ಈ ಹೇಳಿಕೆಯ ಪ್ರಕಾರ, ಓಲಿ ಅವರ ಹೇಳಿಕೆ, ಯಾವುದೇ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಜೊತೆಗೆ ಅದರ ಹಿಂದೆ ಯಾರ ಭಾವನೆ ಹಾಗೂ ಮನಸ್ಸನ್ನು ನೋಯಿಸುವ ಉದ್ದೇಶ ಇಲ್ಲ. ಶ್ರೀ ರಾಮನ ಜನ್ಮ ಸ್ಥಳ ಹಾಗೂ ಇತರ ಹೇಳಿಕೆಗೆ ಸಂಬಂಧಿಸಿ, ಹಲವಾರು ಸುಳ್ಳು ಮಾಹಿತಿಗಳಿವೆ. ಜೊತೆಗೆ ನೇಪಾಳದ ಅಯೋಧ್ಯೆಯ ಬಗ್ಗೆ ಹಲವು ತಪ್ಪು ಆಧಾರಗಳನ್ನು ಈವರೆಗೆ ನೀಡಲಾಗಿದೆ. ಓಲಿಯವರ ಹೇಳಿಕೆ, ನೈಜ ಪುರಾಣ ತಿಳಿದು, ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯತೆ ಎತ್ತಿ ಹಿಡಿಯುವುದಷ್ಟಕ್ಕೆ ಸೀಮಿತಿವಾಗಿದೆ. ಜೊತೆಗೆ ನೇಪಾಳದ ಸಾಂಸ್ಕೃತಿಕ ಭೌಗೋಳಿಕತೆಯ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯತೆಯನ್ನು ಒತ್ತಿ ಹೇಳಿದೆ. ಶ್ರೀ ರಾಮ, ರಾಮಾಯಣ, ಹಾಗೂ ಅವರಿಗೆ ಸಂಬಂಧಿಸಿದ ಇತರ ಪ್ರದೇಶಗಳ ಅಧ್ಯಯನಕ್ಕೆ ಈ ಮೂಲಕ ಕರೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಸಂಸತ್ ಒಪ್ಪಿಗೆ ನೀಡಿದ ದೇಶದ ಹೊಸ ರಾಜಕೀಯ ಭೂಪಟಕ್ಕೆ ಭಾರತ ಅಧಿಕೃತವಾಗಿ ಪ್ರತಿಕ್ರಿಯಿಸಿತು. ಆದರೆ, ಓಲಿ ಅವರು ಅಯೋಧ್ಯೆ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಭಾರತ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಹಿಸಿದೆ. ಭಾರತ ಒಂದು ದೊಡ್ಡ ದೇಶವಾಗಿ, ಹೆಚ್ಚು ಹೆಚ್ಚು ಸಹನೆಯ, ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುತ್ತಿದೆ" ಎನ್ನುತ್ತಾರೆ ಕೆ. ಯೊಮ್ . ಇವರು ಒಬ್ಸರ್ವರ್ ರಿಸರ್ಚ್ ಫೌಂಡೇಶನ್‍ನ ಎಂಬ ನೀತಿ ನಿರೂಪಕ ಸಂಸ್ಥೆಯ ನೆರೆಹೊರೆ ದೇಶಗಳ ಜೊತೆಗಿನ ಸಂಬಂಧದ ಪೀಠದ ಹಿರಿಯ ತಜ್ಞ. ಈಟಿವಿ ಭಾರತ್‍ಗೆ ಅವರು ಈ ಪ್ರತಿಕ್ರಿಯೆ ನೀಡಿದರು. ನಾವು ಇದನ್ನು ಹೆಚ್ಚು ಹೆಚ್ಚು ಪಾಲಿಸಬೇಕಿದೆ ಎಂದು ಅವರು ತಿಳಿಸಿದರು. ನವದೆಹಲಿ, ನೇಪಾಳ ನೀಡುವ ಎಲ್ಲಾ ಹೆಳಿಕೆಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.
9 ಸದಸ್ಯರ ಕಮ್ಯೂನಿಸ್ಟ್ ಪಕ್ಷದ ಕಾರ್ಯಕಾರಿ ಸಮಿತಿ ಸದ್ಯದಲ್ಲೇ ಭೇಟಿಯಾಗಿ, ಆಗಸ್ಟ್ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಪಕ್ಷದ ಕೇಂದ್ರ ಸಮಿತಿಯ ಸಭೆ ದಿನಾಂಕವನ್ನು ಗೊತ್ತು ಪಡಿಸುವ ಸಾಧ್ಯತೆ ಇದೆ. ದಹಾಲ್ ಬಣ ಬಲಿಷ್ಠ ವಾಗಿರುವ ಕಮ್ಯೂನಿಸ್ಟ್ ಪಕ್ಷದ ಸ್ಥಾಯಿ ಸಮಿತಿ ಈ ನಿರ್ಣಯವನ್ನು ಬೆಂಬಲಿಸುವ ಸಾಧ್ಯತೆ ಇದೆ. ಈ ಕೇಂದ್ರ ಸಮಿತಿ ಸಭೆಯಲ್ಲಿ ಓಲಿ ಭವಿಷ್ಯ ನಿರ್ಧಾರವಾಗಲಿದೆ.
ಕಮ್ಯೂನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಸಭೆ ಬಳಿಕವೇ ಓಲಿಯ ಭವಿಷ್ಯ ನಿರ್ಧಾರವಾಗಲಿದೆ. ಅಲ್ಲಿಯವರೆಗೆ ಓಲಿ ಯಾವುದೇ ನಿರ್ಣಯ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಆರ್ಥಿಕ ಕುಸಿತ ಹಾಗೂ ಕೋವಿಡ್ ಸಾಂಕ್ರಾಮಿಕ ರೋಗದ ಭೀತಿ ಇಂತಹ ಸ್ಥಿತಿಗೆ ಕಾರಣವಾಗಿದೆ. ಪಕ್ಷದೊಳಗಿನ ಆಂತರಿಕ ವಿವಾದಗಳು ಆಳವಾಗಿವೆ. ಪಕ್ಷ ಇಬ್ಭಾಗವಾಗುವ ಹೊಸ್ತಿಲಲ್ಲಿದೆ. ಆದರೆ ಈ ಸಮಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಯಾರೂ ತಯಾರಿಲ್ಲ. ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟುವವರಾರು ಎಂದು ಒಬ್ಬ ವೀಕ್ಷಕರು ಈಟಿವಿ ಭಾರತಕ್ಕೆ ಹೆಸರು ಉಲ್ಲೇಖಿಸಬಾರದು ಎಂಬ ಷರತ್ತಿನೊಂದಿಗೆ ತಿಳಿಸಿದರು.
- ಅರುಣಿಮ್ ಭೂಯಾನ್, ಲೇಖಕರು