ಒಂದು ಡಜನ್ ಪಂಚವಾರ್ಷಿಕ ಯೋಜನೆಗಳನ್ನು ನಾವು ಜಾರಿಗೊಳಿಸಿದ ನಂತರ (೬೦ ವರ್ಷಗಳ ನಂತರ) ತನ್ನ ಹಳೆಯ ಕಾಲದ “ಯೋಜನಾ ಆಯೋಗ”ದಿಂದ ಭಾರತ ಸರಕಾರ ದೂರ ಸರಿದಿದೆ. ಅದನ್ನು “ನೀತಿ (ಎನ್ಐಟಿಐ – ನ್ಯಾಶನಲ್ ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ) ಆಯೋಗ” (ಅಕ್ಷರಶಃ ಯೋಜನಾ ಆಯೋಗ ಎಂದೇ ಅರ್ಥವಾಗುತ್ತದೆ) ಎಂದು ಮರುನಾಮಕರಣ ಮಾಡಲಾಗಿದೆ. ಭಾರತವನ್ನು ಪರಿವರ್ತನೆಗೊಳಿಸಲೆಂದು ಅಲೆಗಳಂತೆ ಬಂದ ಬದಲಾವಣೆಗಳಿಂದಾಗಿ ಹೆಸರು ಬದಲಾದ ಮೊದಲ ಐದು ವರ್ಷಗಳಲ್ಲಿ ಇದು ಸಾಕಷ್ಟು ಪರಿಚಿತವಾಗಿದೆ. ಹತ್ತಿರದಿಂದ ನಿಗಾ ವಹಿಸುವ ಹಾಗೂ ಲಭ್ಯವಿರುವ ತಂತ್ರಜ್ಞಾನಗಳ ಬಳಕೆಯ ಮೂಲಕ ಸಾರ್ವಜನಿಕ ವೆಚ್ಚದಲ್ಲಿ ಹೊಣೆಗಾರಿಕೆ ಹೆಚ್ಚಳಕ್ಕೆ ನೀತಿ ಆಯೋಗವು ಒತ್ತು ಕೊಟ್ಟಿದೆ. ಈ ಅನಿವಾರ್ಯ ಬದಲಾವಣೆಯ ಉದ್ದೇಶವೆಂದರೆ ಭಾರತ ಸರಕಾರದ ಯೋಜನೆಗಳನ್ನು ಡಿಜಿಟಲ್ ಮಾದರಿಯಲ್ಲಿ ಜಾರಿಗೊಳಿಸುವುದು ಹಾಗೂ ಸಾವರ್ಜನಿಕ ನಿಧಿ ನಿರ್ವಹಣಾ ವ್ಯವಸ್ಥೆಯಲ್ಲಿ (ಪಿಎಫ್ಎಂಎಸ್ – ಪಬ್ಲಿಕ್ ಫಂಡ್ ಮ್ಯಾನೇಜ್ಮೆಂಟ್ ಸಿಸ್ಟಂ) ಪಾರದರ್ಶಕತೆಯನ್ನು ಹಾಗೂ ಸಾರ್ವಜನಿಕ ಹಣ ಬಳಸುವುದರಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸುವುದಾಗಿದೆ.
ಈಗ, ೩೦ ವರ್ಷಗಳ ನಂತರ ಪರಿಷ್ಕರಿಸಲಾದ ಹೊಸ ಶಿಕ್ಷಣ ನೀತಿಯು (ಎನ್ಇಪಿ – ನ್ಯೂ ಎಜುಕೇಶನ್ ಪಾಲಿಸಿ) – ೨೦೨೦ ತನ್ನ ಹೊಣೆಗಾರಿಕೆಯ ಮೂಲಕ ಗುಣಮಟ್ಟ ಹೆಚ್ಚಿಸಿಕೊಂಡು, ರಾಷ್ಟ್ರೀಯ ಅವಶ್ಯಕತೆಗಳನ್ನು ಜಾಗತಿಕ ಗುಣಮಟ್ಟಗಳ ಆಧಾರದಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸುವುದಾಗಿ ನಿರೀಕ್ಷಿಸಲಾಗಿದೆ. ಎನ್ಇಪಿ – ೨೦೨೦ರಲ್ಲಿ ಹಲವಾರು ಹೊಸ ನೀತಿ ಮಾರ್ಗದರ್ಶಿಗಳು ಇದ್ದಾಗ್ಯೂ, ಈ ಲೇಖನವು ಸಂಶೋಧನೆಗೆ ಸಂಬಂಧಿಸಿದ ನೀತಿಗಳನ್ನು ವಿಸ್ತೃತವಾಗಿ ವಿಶ್ಲೇಷಿಸುವುದಕ್ಕೆ ಮಾತ್ರ ಸೀಮಿತವಾಗಿದೆ.
STEM ಮೇಲಿನ ಗಮನ STEAM ನತ್ತ ಸ್ಥಳಾಂತರ
ಶಿಕ್ಷಣ ಹಾಗೂ ಸಂಶೋಧನೆ ಯಾವಾಗಲೂ ಪರಸ್ಪರ ಜೊತೆಯಾಗಿಯೇ ಸಾಗುವಂಥವು. ಒಂದು ದೇಶ ಸ್ವಾವಲಂಬಿಯಾಗಬೇಕೆಂದರೆ ಸಂಶೋಧನೆಯು ಮಾಡಬೇಕಾದ ಕೆಲಸಗಳು ಬಹಳಷ್ಟಿರುತ್ತವೆ. “ಆತ್ಮನಿರ್ಭರ ಭಾರತ” (ಸ್ವಾವಲಂಬಿ ಭಾರತ) ಪರಿಕಲ್ಪನೆಯ ಕುರಿತು ಭಾರತ ಮಾತನಾಡುತ್ತಿರುವ ಈ ಸಂದರ್ಭದಲ್ಲಿ ಅದು ಹೆಚ್ಚು ಔಚಿತ್ಯಪೂರ್ಣವೂ ಆಗಿದೆ. ಸಂಶೋಧನೆಯ ಮೇಲೆ ವಿನಿಯೋಗಿಸಲಾಗುವ ಹೂಡಿಕೆಯು ನಿರಂತರವಾಗಿ ಹಾಗೂ ದೀರ್ಘ ಕಾಲದವರೆಗೆ ಹೆಚ್ಚಿನ ಲಾಭಗಳನ್ನು ನೀಡುತ್ತ ಹೋಗುತ್ತವೆ. ಸಂಶೋಧನೆಯ ವೆಚ್ಚದ ಮೇಲೆ ಮಾಡಲಾಗುವ ಹೂಡಿಕೆಯಿಂದ ದಕ್ಕುವ ಲಾಭಗಳು ಯಾವಾಗಲೂ ವೆಚ್ಚಕ್ಕಿಂತ ಹೆಚ್ಚೇ ಇರುತ್ತವೆ! ಯುವ ಮನಸ್ಸುಗಳನ್ನು ಭಾರತದ ಶಾಲೆ / ಕಾಲೇಜು / ವಿಶ್ವವಿದ್ಯಾಲಯಗಳಲ್ಲಿ ಸಾಂಸ್ಕೃತಿಕ, ಭಾಷಾ ಸಂಬಂಧಿ ಹಾಗೂ ಸಾಮಾಜಿಕ-ಆರ್ಥಿಕ ವೈವಿಧ್ಯತೆಗಳ ಮೇಲೆ ಒತ್ತಾಯಪೂರ್ವಕವಾಗಿ ತೊಡಗಿಸುವುದರಿಂದ ದೇಶವನ್ನು ಕಾಡುತ್ತಿರುವ ವಿವಿಧ ವಿಷಯಗಳತ್ತ ಹಲವಾರು ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸುವುದು ಹಾಗೂ ಆ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವುದು ಸಾಧ್ಯವಾಗಿದೆ. ಮಾನವಿಕ ಶಾಸ್ತ್ರಗಳು ಹಾಗೂ ಸಾಮಾಜಿಕ ವಿಜ್ಞಾನ ಶಾಖೆಗಳ ಮೇಲಿನ ಸಂಶೋಧನೆಯ ಹುಮ್ಮಸ್ಸು ಸಾಧ್ಯವಾಗಿರುವುದು ಇಂತಹ ಉದ್ದೀಪನದಿಂದಲೇ. ವಿಶ್ವವಿದ್ಯಾಲಯಗಳಲ್ಲಿ ಹರಿತವಾಗುವ ಇದು ಸಂಶೋಧನೆಯ ಸಂಸ್ಕೃತಿಯನ್ನು ಪೋಷಿಸುತ್ತದೆ. ಆದರೆ, ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ (STEM ಸೈನ್ಸ್, ಟೆಕ್ನಾಲಜಿ, ಎಂಜಿನೀರಿಂಗ್ ಅಂಡ್ ಮ್ಯಾಥೆಮ್ಯಾಟಿಕ್ಸ್) ವಿಷಯಗಳ ಮೇಲಿನ ಸಂಶೋಧನೆಯ ಬಹುಪಾಲು ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಹೊರಗೆ ನಡೆಯುತ್ತವೆ. ಭಾರತದಲ್ಲಿ ಈ ವಿಷಯಗಳ ಮೇಲೆ ವಿಶ್ವವಿದ್ಯಾಲಯದ ಸಂಶೋಧಕರು ಒಂದೆಡೆ ವಿಜ್ಞಾನಿಗಳೊಂದಿಗೆ, ಮತ್ತೊಂದೆಡೆ ಜಾಗತಿಕ ನಾಯಕರೊಂದಿಗೆ ಸ್ಪರ್ಧೆ ನಡೆಸಬೇಕಿದೆ. ವಿಶ್ವವಿದ್ಯಾಲಯಗಳಿಗೆ ಇರುವ ಅನುಕೂಲ ಏನೆಂದರೆ, ವರ್ಷದಿಂದ ವರ್ಷಕ್ಕೆ ಯುವ ಪ್ರತಿಭೆಗಳು ಬರುತ್ತಲೇ ಇರುತ್ತಾರೆ. ವಿಶ್ವವಿದ್ಯಾಲಯಗಳು, ಐಐಟಿ / ಎನ್ಐಐಟಿಗಳ ಸಹಿತ ಉನ್ನತ ಶಿಕ್ಷಣ ಸಂಸ್ಥೆಗಳು (HEI ಹೈಯರ್ ಎಜುಕೇಶನ್ ಇನ್ಸ್ಟಿಟ್ಯೂಷನ್ಸ್) ಗರಿಷ್ಠ ಮಟ್ಟದಲ್ಲಿ ಬಹುಶಿಸ್ತೀಯ ಸಂಸ್ಥೆಗಳಾಗಿ ಪರಿವರ್ತನೆಯಾಗಬೇಕು ಎಂಬ ದೃಷ್ಟಿಕೋನವನ್ನು ಎನ್ಇಪಿ-೨೦೨೦ ಹೊಂದಿದೆ. ಅಂದರೆ, HEI ಗಳು STEAM (ಕಲಾ ಪ್ರಕಾರಗಳನ್ನೂ ಗಣನೀಯ ಪ್ರಮಾದಲ್ಲಿ ಒಳಗೊಂಡಂತೆ) ಕೇಂದ್ರಿತ ಸಂಸ್ಥೆಗಳಾಗಿ ರೂಪಾಂತರ ಹೊಂದಬೇಕೇ ಹೊರತು ತಮ್ಮ ಸಂಶೋಧನೆಯನ್ನು ಕೇವಲ STEM ವಿಷಯಗಳಿಗೆ ಸೀಮಿತವಾಗಿ ಇರಿಸಬಾರದು ಎಂಬುದು ಈ ನೀತಿಯ ಉದ್ದೇಶವಾಗಿದೆ. ಈ ಪ್ರಕ್ರಿಯ ಜೊತೆಗೇ ಜಗತ್ತು ಹಾಗೂ ಮುಖ್ಯವಾಗಿ ಭಾರತಕ್ಕೆ ಕಲಾ ಮತ್ತು ಸಾಮಾಜಿಕ ವಿಜ್ಞಾನಗಳ ಮಹತ್ವದ ಕುರಿತೂ ನೀತಿಯಲ್ಲಿ ಒತ್ತು ಕೊಡಲಾಗಿದೆ.
ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ
ಭಾರತದಲ್ಲಿ ಸಂಶೋಧನೆ ಮೇಲೆ ಮಾಡಲಾಗುವ ಹೂಡಿಕೆಯ ವಿಶಿಷ್ಟ ವಿಧಾನ ಕುರಿತಂತೆ ಅಭಿವೃದ್ಧಿ ಹೊಂದಿರುವ ದೇಶಗಳ ಹಲವಾರು ಸಮಕಾಲೀನರು ಮಾಡಿರುವ ತೀಕ್ಷ್ಣ ಗಮನಿಸುವಿಕೆಯನ್ನು ಹಲವಾರು ಭಾರತೀಯ ಪ್ರಾಧ್ಯಾಪಕರು ಅನುಭವಿಸಿದ್ದಾರೆ. ೧೫,೦೦೦ಕ್ಕೂ ಹೆಚ್ಚು ಫೆಲೋಶಿಪ್ಗಳು ಹಾಗೂ ಕೆಲವು ಸಾವಿರ ಸ್ನಾತಕೋತ್ತರ ಡಾಕ್ಟರೇಟ್ ಫೆಲೋಶಿಪ್ಗಳು ಭಾರತ ಸರಕಾರದಿಂದ ಬೆಂಬಲಿತವಾಗಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಪ್ರಧಾನಮಂತ್ರಿಗಳ ಸಂಶೋಧನಾ ಫೆಲೋಶಿಪ್ (PMRF – ಪ್ರೈಮ್ ಮಿನಿಸ್ಟರ್ಸ್ ರೀಸರ್ಚ್ ಫೆಲೋಶಿಪ್) ಯೋಜನೆಯಡಿ ಆಕರ್ಷಕ ಹಾಗೂ ಹೆಚ್ಚು ಸ್ಪರ್ಧಾತ್ಮಕ ಸಂಶೋಧನಾ ಫೆಲೋಶಿಪ್ಗಳನ್ನು ನಾವು ಹೊಂದಿದ್ದೇವೆ. ಯಾವುದೇ ನಿರ್ಬಂಧಗಳನ್ನು ಹಾಕದೇ ನಮ್ಮ ಯುವ ಪ್ರತಿಭಾವಂತರನ್ನು ಕುತೂಹಲ-ಭರಿತ ಸಂಶೋಧನೆ ಕಡೆಗೆ ಆಕರ್ಷಿಸುವುದು ಹಾಗೂ ಪ್ರೇರೇಪಿಸುವುದೇ ಈ ಸಂಶೋಧನಾ ಫೆಲೋಶಿಪ್ಗಳ ಪ್ರಾಥಮಿಕ ಉದ್ದೇಶ. ಯುವ ಸಂಶೋಧಕರಿಗೆ ರಾಷ್ಟ್ರ ಮಟ್ಟದ ಸ್ಪರ್ಧೆಯ ಮೂಲಕ, ಪಿಎಚ್ಡಿಗೆ ನೇರವಾಗಿ ಸಂಶೋಧನಾ ಫೆಲೋಶಿಪ್ಗಳ ಮೂಲಕ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡುತ್ತಿರುವುದು ಭಾರತದ ವಿಶೇಷತೆಯಾಗಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧಕರಿಗೆ ಹಾಗೂ ಸಂಶೋಧನಾ ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳಿಗೆ ತಾರ್ಕಿಕವಾಗಿ ಅಧಿಕ ಯಶಸ್ಸಿನ ಪ್ರಮಾಣದಲ್ಲಿ ಸಂಶೋಧನಾ ದತ್ತಿಗಳನ್ನು (ಸಂಶೋಧನಾ ದತ್ತಿಗಳಿಗಾಗಿ ನಡೆಯುವ ಜಾಗತಿಕ ಸ್ಪರ್ಧೆಗೆ ಹೋಲಿಸಿದರೆ) ಉದಾರವಾಗಿ ಕೊಡಲಾಗುತ್ತಿದೆ. ಕೊಡಲಾದ ಸನ್ನಿವೇಶಗಳಲ್ಲಿ ಉತ್ತಮ ಸಾಧನೆ ತೋರಿದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಶೋಧನಾ ಮೂಲಸೌಕರ್ಯ ಬೆಂಬಲವನ್ನು ಉದಾರವಾಗಿ ನೀಡಲಾಗುತ್ತಿದೆ. ವೈಯಕ್ತಿಕವಾಗಿ ಅಥವಾ ತಂಡವಾಗಿ ಸಂಶೋಧಕರಿಗೆ ನೇರವಾಗಿ ದತ್ತಿಗಳನ್ನು ನೀಡುವ ಹೊರತಾಗಿಯೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ), ಜೈವಿಕ ತಂತ್ರಜ್ಞಾನ ಇಲಾಖೆ (DBT ಡಿಪಾರ್ಟ್ಮೆಂಟ್ ಆಫ್ ಬಯೋಟೆಕ್ನಾಲಜಿ), ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ICAR ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರೀಸರ್ಚ್), ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಪರಿಷತ್ತು (CSIR ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್), ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಶನ್) ಮುಂತಾದವುಗಳ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ರೀತಿಯ ಬೆಂಬಲವನ್ನು ಬಳಸಿಕೊಳ್ಳುವ ಮೂಲಕ, ಬನಾರಸ್ ಹಿಂದು ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಹೈದರಾಬಾದ್ ವಿಶ್ವವಿದ್ಯಾಲಯದಂತಹ ಕೆಲವು ಕೇಂದ್ರೀಯ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಸಂಶೋಧನಾ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿವೆಯಲ್ಲದೆ ಶ್ರೇಷ್ಠ ಸಂಸ್ಥೆಗಳು (IoE ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್) ಎಂಬ ವಿಶಿಷ್ಟ ಹಿರಿಮೆಗೂ ಪಾತ್ರವಾಗಿವೆ. ಈ ವಿಶ್ವವಿದ್ಯಾಲಯಗಳು IoE ಮನ್ನಣೆಗೆ ಪಾತ್ರವಾಗಿರುವ ತೀವ್ರ ಸಂಶೋಧನಾ ಕೇಂದ್ರಿತ ಪ್ರತಿಷ್ಠಿತ ಸಂಸ್ಥೆಗಳಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಕೆಲವು ಐಐಟಿಗಳೊಂದಿಗೆ ಸೇರ್ಪಡೆಯಾಗಿವೆ. ಇಂತಹ ಇನ್ನಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಸಂಶೋಧನಾ ವಿಶ್ವವಿದ್ಯಾಲಯಗಳಾಗಬೇಕಿರುವುದು ಭಾರತಕ್ಕೆ ಅವಶ್ಯಕವಾಗಿದ್ದು, ಈ ಅಂಶವನ್ನು ಎನ್ಇಪಿ-೨೦೨೦ ಪ್ರಮುಖವಾಗಿ ಒಳಗೊಂಡಿದೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಫೆಲೋಶಿಪ್ಗಳು ಹಾಗೂ ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಸಂಶೋಧನಾ ದತ್ತಿಗಳನ್ನು ನೀಡುತ್ತಿರುವುದು ಭಾರತದಲ್ಲಿ ಸಂಶೋಧನಾ ಸಂಸ್ಕೃತಿಯಲ್ಲಿ ನಾಟಕೀಯ ಸುಧಾರಣೆಗಳನ್ನು ತಂದಿದೆ. ಪ್ರಸಕ್ತ ವಿಧಾನವನ್ನು ಇನ್ನಷ್ಟು ಚುರುಕಾಗಿಸುವುದರ ಮೂಲಕ ಸಂಶೋಧನೆಯ ಮೇಲೆ ಬಳಕೆಯಾಗುತ್ತಿರುವ ತೆರಿಗೆದಾರರ ಹಣಕ್ಕೆ ಹೆಚ್ಚು ಬಾಧ್ಯತೆ ತಂದುಕೊಡುವುದು ಸದ್ಯದ ಅವಶ್ಯಕತೆಯಾಗಿದೆ. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವು (NRF ನ್ಯಾಶನಲ್ ರೀಸರ್ಚ್ ಫೌಂಡೇಶನ್) ಇಂತಹ ಯೋಚನೆಯೊಂದನ್ನು ಎನ್ಇಪಿ-೨೦೨೦ ಮೂಲಕ ಹರಿಬಿಟ್ಟಿದ್ದು, ಸಂಶೋಧನೆಯ ಹೊರಹರಿವಿನ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ ಹೆಚ್ಚಿನ ಪ್ರಮಾಣದ ಪಾರದರ್ಶಕತೆ ಹಾಗೂ ಬಾಧ್ಯತೆಯನ್ನು ಸಾಧಿಸುವ ಒಂದೇ ಮಾರ್ಗವಾಗಬಲ್ಲ ಸಾಧ್ಯತೆಯಾಗಿ ಇದು ಗೋಚರವಾಗುತ್ತಿದೆ. ಸಂಶೋಧನಾ ಆದ್ಯತೆಗಳನ್ನು ರೂಪಿಸುವುದು, ರಾಷ್ಟ್ರೀಯ ಅವಶ್ಯಕತೆಗಳನ್ನು ಗುರುತಿಸುವುದು, ಜಾಗತಿಕ ಗುಣಮಟ್ಟದಲ್ಲಿ ಸಂಶೋಧನೆಗಳನ್ನು ನಡೆಸುವಂತೆ ಸಂಶೋಧಕರಿಗೆ ಬೆಂಬಲ ನೀಡುವುದು ಹಾಗೂ ಸಂಶೋಧನಾ ದತ್ತಿಗಳನ್ನು ಪಡೆಯುತ್ತಿರುವ ವ್ಯಕ್ತಿಗಳು ಅಥವಾ ತಂಡಗಳ ಸಾಧನೆಗಳ ಮೇಲೆ ನಿಗಾ ವಹಿಸುವುದನ್ನು NRF ಮಾಡಬೇಕಿದೆ. ದೇಶದಲ್ಲಿ ಸಂಶೋಧನಾ ಜೈವಿಕ ವ್ಯವಸ್ಥೆಯನ್ನು ಪರಿವರ್ತಿಸಬಲ್ಲ ಸಾಧನವಾಗಿ NRF ಅನ್ನು NEP ನೋಡುತ್ತಿದೆ.