ನವದೆಹಲಿ: ಭಾರತದ ಕೊರೊನಾ ವಿರುದ್ಧದ ಹೋರಾಟವನ್ನು ಮತ್ತೆ ಜನರಿಗೆ ನೆನಪಿಸಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಇತರ ಜೀವಗಳನ್ನು ಉಳಿಸಿದ ಕೋವಿಡ್ ವಾರಿಯರ್ಗಳ ಪಾತ್ರವನ್ನು ಶ್ಲಾಘಿಸಿದ್ದಾರೆ.
"ದೇಶದ ಕೋವಿಡ್ -19 ಹೋರಾಟವು ಜನರಿಂದ ಪ್ರಾರಂಭವಾಗಿದ್ದು, ಕೊರೊನಾ ವಾರಿಯರ್ಗಳಿಂದಾಗಿ ಹೆಚ್ಚಿನ ಶಕ್ತಿ ಪಡೆಯುತ್ತದೆ. ನಾವು ಒಗ್ಗೂಡಿ ಮಾಡಿರುವ ಪ್ರಯತ್ನಗಳು ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡಿವೆ. ನಾವು ನಮ್ಮ ಈ ಪ್ರಯತ್ನವನ್ನು ಮುಂದುವರೆಸಬೇಕು ಮತ್ತು ನಮ್ಮ ಜನರನ್ನು ವೈರಸ್‌ನಿಂದ ರಕ್ಷಿಸಬೇಕು" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
"ಮಾಸ್ಕ್ ಧರಿಸುವ, ಕೈ ತೊಳೆಯುವ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಮರೆಯದಿರಿ. 'ಆರು ಅಡಿ ಅಂತರ ಬಹಳ ಅವಶ್ಯ'ಕ ('ದೋ ಗಜ್ ಕಿ ದೂರಿ ಬೇಹದ್ ಜರೂರಿ') ಎಂಬುದನ್ನು ಸದಾ ನೆನಪಲ್ಲಿಟ್ಟುಕೊಳ್ಳಿ. ಕೊರೊನಾ ವಿರುದ್ಧ ಹೋರಾಡಲು ನಾವು ಒಂದಾಗೋಣ, ಜೊತೆಯಾಗೇ ಈ ಯುದ್ಧ ಗೆಲ್ಲೋಣ" ಎಂದು ಪ್ರಧಾನಿ ಮತ್ತೆ ಕರೆ ನೀಡಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 68 ಲಕ್ಷ ಗಡಿ ದಾಟಿದ್ದು, 1,05,526 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಹಬ್ಬ-ಹರಿದಿನಗಳು ಮುಂಬರಲಿದ್ದು, ಈ ವೇಳೆ ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಬಾರದೆಂದು ಮೋದಿ ಜನತೆಯನ್ನು ಪುನಃ ಎಚ್ಚರಿಸಿದ್ದಾರೆ.